ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಮತ್ತೊಬ್ಬ ಹಿಂದೂ ವ್ಯಕ್ತಿ ಬಜೇಂದ್ರ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ತಿಂಗಳಲ್ಲಿ ನಡೆದ ಹಿಂದೂಗಳ ಮೂರನೇ ಹತ್ಯೆ ಇದಾಗಿದೆ.
ಸುಳ್ಳು ಧರ್ಮನಿಂದನೆಯ ಆರೋಪದ ಮೇಲೆ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್‌ರನ್ನು ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ, ಭಾಲುಕಾ ಉಪಜಿಲ್ಲಾದಲ್ಲಿ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದಾಗ ಬಿಸ್ವಾಸ್ (40) ಅವರನ್ನು ಸಹೋದ್ಯೋಗಿಯೊಬ್ಬ ಕೊಂದಿದ್ದಾನೆ. ಉಪಜಿಲ್ಲಾದ ಮೆಹ್ರಾಬರಿ ಪ್ರದೇಶದಲ್ಲಿರುವ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಗುಂಡಿನ ದಾಳಿ ನಡೆದಿದೆ.
ಬಿಸ್ವಾಸ್ ಬಾಂಗ್ಲಾದೇಶದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಅರೆಸೈನಿಕ ಸಹಾಯಕ ಪಡೆಯಾದ ಅನ್ಸರ್ ಬಹಿನಿಯ ಸದಸ್ಯರಾಗಿದ್ದರು. ಇದು ದೇಶದಲ್ಲಿ ಆಂತರಿಕ ಭದ್ರತೆ ಮತ್ತು ಕಾನೂನು ಜಾರಿ ಜವಾಬ್ದಾರಿಯನ್ನು ಹೊಂದಿದೆ. ಕೊಲೆ ಮಾಡಿದ ಅನ್ಸಾರ್ ಸದಸ್ಯ ನೋಮನ್ ಮಿಯಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಅನ್ಸಾರ್ ಸದಸ್ಯರಾದ ನೋಮನ್ ಮತ್ತು ಬಿಸ್ವಾಸ್ ಒಟ್ಟಿಗೆ ಕುಳಿತಿದ್ದರು. ನೋಮನ್ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದು, ಬಿಸ್ವಾಸ್ ಎಡ ತೊಡೆಯಲ್ಲಿ ತೀವ್ರವಾಗಿ ಗಾಯವಾಗಿತ್ತು. ಸಹೋದ್ಯೋಗಿಗಳು ಹಿಂದೂ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಬಿಸ್ವಾಸ್ ಮೃತಪಟ್ಟಿದ್ದಾರೆ.
