ಉದಯವಾಹಿನಿ, ನವದೆಹಲಿ: ದೇಶದ ಮೊದಲ ಬುಲೆಟ್ ರೈಲು 2027ರ ಆಗಸ್ಟ್ 15 ರಂದು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲು ಸೂರತ್‌ನಿಂದ ಬಿಲಿಮೋರಾವರೆಗೆ ತೆರೆಯಲಾಗುತ್ತದೆ. ನಂತರ ವಾಪಿಯಿಂದ ಸೂರತ್‌ವರೆಗೆ ತೆರೆಯಲಾಗುವುದು. ನಂತರದ ಹಂತದಲ್ಲಿ ಅಹಮದಾಬಾದ್, ಥಾಣೆ, ಕೊನೆಗೆ ಮುಂಬೈನಿಂದ ಅಹಮದಾಬಾದ್‌ವರೆಗೆ ಸಂಚರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿ-ಕೋಲ್ಕತ್ತಾ ಮಾರ್ಗದಲ್ಲಿ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹೊಸ ಸೇವೆಯು ಪ್ರಯಾಣಿಕರಿಗೆ ಮಾತ್ರವಲ್ಲದೆ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಎರಡು ಪ್ರಮುಖ ನಗರಗಳ ನಡುವೆ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹ ರಾತ್ರಿ ಪ್ರಯಾಣವನ್ನು ಬಯಸುವ ಪ್ರವಾಸಿಗರಿಗೆ ಪ್ರಯೋಜನ ಸಿಗಲಿದೆ ಎಂದರು. ಸ್ಥಳೀಯವಾಗಿ ನಿರ್ಮಿಸಲಾದ ವಂದೇ ಭಾರತ್ ಸ್ಲೀಪರ್ ರೈಲಿನ ಅಂತಿಮ ಹೈಸ್ಪೀಡ್ ಪರೀಕ್ಷಾರ್ಥ ಸಂಚಾರವು ಇತ್ತೀಚೆಗೆ ಕೋಟಾ-ನಾಗ್ಡಾ ವಿಭಾಗದಲ್ಲಿ ಪೂರ್ಣಗೊಂಡಿತು. ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ರೈಲು ಗಂಟೆಗೆ 180 ಕಿ.ಮೀ ವೇಗವನ್ನು ತಲುಪಿತು ಎಂದು ಹೇಳಿದರು.
