ಉದಯವಾಹಿನಿ, ನವದೆಹಲಿ ಮೋದಿ ಸರ್ಕಾರವನ್ನು ತೆಗೆದುಹಾಕಲು ಬಾಂಗ್ಲಾದೇಶ ಮಾದರಿಯ ಪ್ರತಿಭಟನೆ ಅಗತ್ಯ ಎಂದ ಐಎನ್‌ಎಲ್‌ಡಿ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಸರ್ಕಾರ ಬದಲಾವಣೆಗಳಿಗೆ ಕಾರಣವಾದ ಪ್ರತಿಭಟನೆಗಳಂತೆಯೇ ಭಾರತವೂ ಪ್ರತಿಭಟನೆಗಳಿಗೆ ಸಾಕ್ಷಿಯಾಗಬೇಕು ಎಂಬ ಭಾರತೀಯ ರಾಷ್ಟ್ರೀಯ ಲೋಕದಳ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಚೌಟಾಲಾ ಈ ಪ್ರಾದೇಶಿಕ ಘಟನೆಗಳನ್ನು ಉಲ್ಲೇಖಿಸಿ, ಪ್ರಸ್ತುತ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಲು ಭಾರತದಲ್ಲೂ ಅದೇ ತಂತ್ರಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು. ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಿರಿ ಎಂದು ಪ್ರತಿಪಾದಿಸಿದ ಚೌಟಾಲ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಯಿತು.
ಶ್ರೀಲಂಕಾ, ಬ್ಲಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರವನ್ನು ಯುವಕರು ಕಿತ್ತೊಗೆದಂತೆಯೇ ಭಾರತದಲ್ಲಿಯೂ ಅದೇ ತಂತ್ರಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು. ಚೌಟಾಲಾ ಅವರ ಈ ಹೇಳಿಕೆಗಳು ಭಾರತದ ಸಂವಿಧಾನಾತ್ಮಕ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ಮಾನದಂಡಗಳಿಗೆ ಬೆದರಿಕೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಹೇಳಿದರು. ವಿಡಿಯೊದಲ್ಲಿ ಶೆಹಜಾದ್ ಪೂನಾವಾಲಾ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಅವರು, ಸಂವಿಧಾನ ವಿರೋಧಿ, ಭಾರತ ವಿರೋಧಿ ಮನೋಭಾವವನ್ನು ಅಳವಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಹೋಗುವ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಹಾಳು ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
