ಉದಯವಾಹಿನಿ, ತಿರುವನಂತಪುರಂ: ಕೆರಳದ ತ್ರಿಶೂರ್ ರೈಲು ನಿಲ್ದಾಣದಲ್ಲಿ ಭಾನುವಾರ (ಜ.4) ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ನಿಲ್ದಾಣದ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ.
ಪ್ಲಾಟ್‌ಫಾರ್ಮ್ ಸಂಖ್ಯೆ 2ರ ಬಳಿ ಇರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡದಿಂದ ಪ್ರಯಾಣಿಕರು ಮತ್ತು ಹತ್ತಿರದ ನಿವಾಸಿಗಳಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಬೆಳಿಗ್ಗೆ 6:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಪ್ರತಿದಿನ 500 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಪಾರ್ಕಿಂಗ್‌ ಮಾಡಿದ್ದ ವಾಹನಗಳಲ್ಲಿ ಇಂಧನ ಇದ್ದಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿದೆ ಇದು ಅವಘಡದ ತೀವ್ರತೆಗೆ ಕಾರಣವಾಗಿದೆ. ಹಲವಾರು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಕೆಲವು ವಾಹನಗಳಿಗೆ ಬಾಗಶಃ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಾನಿಗೊಳಗಾದ ವಾಹನಗಳ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಇಂಧನ ಸೋರಿಕೆ ಅಥವಾ ಬೇರೆ ಕಾರಣದಿಂದ ಈ ಅವಘಡ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರೈಲ್ವೆ ನಿಲ್ದಾಣದ ಆವರಣದ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!