ಉದಯವಾಹಿನಿ, ಉದಯಪುರ : ಜಿಲ್ಲೆಯ ಓಗ್ನಾ ಪೊಲೀಸ್ ಠಾಣೆ ಪ್ರದೇಶದ ಖಾಪ್ ಪಂಚಾಯಿತಿಯೊಂದು ವ್ಯಕ್ತಿಯೊಬ್ಬರ ವಿರುದ್ಧ ಕಠಿಣ ಆದೇಶ ಹೊರಡಿಸಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದೆ. ಈತನಿಗೆ ಸಹಾಯ ಮಾಡುವ ಯಾರಿಗಾದರೂ 1 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.ಇದರ ವಿರುದ್ಧ ಸಂತ್ರಸ್ತ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರು ನೀಡಿದ ಒಂದು ವಾರ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿರುವ ಅವರು, ಜಿಲ್ಲಾಧಿಕಾರಿ ಕಚೇರಿಗೆ ಮತ್ತೊಂದು ದೂರು ನೀಡಿದ್ದಾರೆ.
ಪ್ರಕರಣದ ವಿವರ: ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಹೆಸರು ರತನ್ ಲಾಲ್. ಈತನೊಂದಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ವಿಧಿಸಲಾಗಿದೆ. ಡಿಸೆಂಬರ್ 24 ರಂದು ಈ ಶಿಕ್ಷೆ ಪ್ರಕಟಿಸಲಾಗಿದೆ. ಗ್ರಾಮದಿಂದ ಹೊರಹಾಕಲ್ಪಟ್ಟಾಗಿನಿಂದ ತಾನು ಮತ್ತು ತನ್ನ ಇಡೀ ಕುಟುಂಬವು ನೋವು ಅನುಭವಿಸುತ್ತಿದೆ. ತಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ತಿಳಿದ ಬಳಿಕ ಕೆಲವು ಗ್ರಾಮಸ್ಥರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಕುಟುಂಬ ಇನ್ನಷ್ಟು ಆಘಾತಕ್ಕೆ ಒಳಗಾಗಿದೆ. ನಮಗೆ ನ್ಯಾಯ ಒದಗಿಸಬೇಕು ಮತ್ತು ಬಹಿಷ್ಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷೆಗೆ ಕಾರಣವೇನು? ಬಹಿಷ್ಕಾರಕ್ಕೆ ಒಳಗಾದ ರತನ್ ಲಾಲ್ ಅವರು ದಿನೇಶ್ ಜೈನ್ ಎಂಬ ವ್ಯಕ್ತಿಯೊಂದಿಗೆ ಗ್ರಾಮದಲ್ಲಿ ಗಡಿ ಗೋಡೆ ನಿರ್ಮಾಣ ಪ್ರಾರಂಭಿಸಿದ್ದರು. ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಭೂಮಿ ಒತ್ತುವರಿ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಗಳ ನಂತರ, ರತನ್ ಲಾಲ್ ಅವರು ತಕ್ಷಣವೇ ನಿರ್ಮಾಣ ನಿಲ್ಲಿಸಿದ್ದಾರೆ. ಆದರೂ ಕೆಲವು ಗ್ರಾಮಸ್ಥರು ಖಾಪ್ ಪಂಚಾಯಿತಿಗೆ ಈ ಬಗ್ಗೆ ಮಾಹಿತಿ ನೀಡಿ, ತಮಟೆ ಬಾರಿಸಿ, ರತನ್ ಲಾಲ್ ವಿರುದ್ಧ ಆದೇಶ ಹೊರಡಿಸಿದ್ದಾರೆ.
