ಉದಯವಾಹಿನಿ : ಇತ್ತೀಚಿನ ಅಮೆರಿಕದ ದಾಳಿಯ ಬಳಿಕ ವೆನೆಜುವೆಲಾ ಮತ್ತೊಮ್ಮೆ ಜಾಗತಿಕ ಚರ್ಚೆಗೆ ಗ್ರಾಸವಾಗಿದೆ. ಭಾರಿ ಆರ್ಥಿಕ ಸಂಕಷ್ಟ, ಆಕಾಶಕ್ಕೇರುತ್ತಿರುವ ಹಣದುಬ್ಬರ ಒಂದೆಡೆ ಇದ್ದರೆ, ಮತ್ತೊಂದೆಡೆ ಇಲ್ಲಿ ಪೆಟ್ರೋಲ್ ದರ ಕೇಳಿದರೆ ಯಾರಿಗೂ ಆಶ್ಚರ್ಯವಾಗುತ್ತದೆ. ಕುಡಿಯುವ ನೀರಿಗಿಂತಲೂ ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುವ ವಿಶ್ವದ ಏಕೈಕ ದೇಶವೆಂದರೆ ಅದು ವೆನೆಜುವೆಲಾ.
ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ಬೆಲೆ ವೆನೆಜುವೆಲಾದಲ್ಲಿ ಸಿಗುತ್ತದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 0.02 ಡಾಲರ್ ಮಾತ್ರ. ಭಾರತೀಯ ರೂಪಾಯಿಯಲ್ಲಿ ನೋಡಿದರೆ ಇದು ಸುಮಾರು ₹1.66 ಮಾತ್ರ. ಈ ದರ ಕೇಳಿದರೆ ಭಾರತ ಸೇರಿದಂತೆ ಅನೇಕ ದೇಶಗಳ ಜನರಿಗೆ ನಂಬಲಿಕ್ಕೇ ಆಗದು. ಆದರೆ ಅಚ್ಚರಿಯ ವಿಷಯವೇನೆಂದರೆ, ಇದೇ ದೇಶದಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್‌ಗಿಂತ ಹೆಚ್ಚು. ವೆನೆಜುವೆಲಾದಲ್ಲಿ 1.5 ಲೀಟರ್ ಬಾಟಲ್ ನೀರಿನ ಬೆಲೆ ಸಾಮಾನ್ಯವಾಗಿ 0.60 ಡಾಲರ್‌ನಿಂದ 3 ಡಾಲರ್‌ವರೆಗೆ ಇದೆ. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು ₹50 ರಿಂದ ₹250 ವರೆಗೆ ಆಗುತ್ತದೆ. ಪೆಟ್ರೋಲ್ ಅಗ್ಗವಾದರೂ, ಆಹಾರ ಪದಾರ್ಥಗಳ ಬೆಲೆಗಳು ಸಾಮಾನ್ಯ ಜನರಿಗೆ ಭಾರೀ ಹೊರೆ ಆಗಿವೆ. ಉದಾಹರಣೆಗೆ, ಒಂದು ಪ್ಯಾಕೆಟ್ ಬ್ರೆಡ್‌ಗೆ ವೆನೆಜುವೆಲಾದಲ್ಲಿ 2.10 ರಿಂದ 2.50 ಡಾಲರ್‌ಗಳವರೆಗೆ ಹಣ ನೀಡಬೇಕಾಗುತ್ತದೆ. ಇದು ಭಾರತೀಯ ರೂಪಾಯಿಯಲ್ಲಿ ₹175 ರಿಂದ ₹210 ರಷ್ಟಾಗುತ್ತದೆ. ಈ ದುಬಾರಿತನಕ್ಕೆ ಪ್ರಮುಖ ಕಾರಣ ದೇಶದಲ್ಲಿ ತೀವ್ರವಾದ ಆಹಾರ ಹಣದುಬ್ಬರ. ವರದಿಗಳ ಪ್ರಕಾರ, ವೆನೆಜುವೆಲಾದ ಆಹಾರ ಹಣದುಬ್ಬರ ದರ ಶೇಕಡಾ 403 ರಷ್ಟಿದೆ. ಇದು ಭಾರತದ ಆಹಾರ ಹಣದುಬ್ಬರ ದರವಾದ 9.94%ಕ್ಕಿಂತ ಸುಮಾರು 40 ಪಟ್ಟು ಅಧಿಕವಾಗಿದೆ. ಇದಕ್ಕೆ ವಿರುದ್ಧವಾಗಿ, ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶ. ಜಾಗತಿಕವಾಗಿ ಲಭ್ಯವಿರುವ ಒಟ್ಟು ಕಚ್ಚಾ ತೈಲ ಸಂಗ್ರಹಗಳಲ್ಲಿ ಸುಮಾರು 18.2% ವೆನೆಜುವೆಲಾಕ್ಕೆ ಸೇರಿದೆ. ಇಷ್ಟೊಂದು ಸಂಪನ್ಮೂಲಗಳಿದ್ದರೂ ದೇಶ ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೇ ಹೋರಾಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
