ಉದಯವಾಹಿನಿ, ಇರಾನ್ ನಲ್ಲಿ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಇಸ್ಲಾಮಿಕ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಇಂದಿಗೆ 12 ದಿನಕ್ಕೆ ಕಾಲಿಟ್ಟಿವೆ. ಖಮೇನಿ ಸರ್ಕಾರವು ಈ ಪ್ರತಿಭಟನೆಗಳನ್ನು ದಮನ ಮಾಡಲು ಆಡಳಿತ ಕ್ರಮಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ವೃದ್ಧ ಮಹಿಳಾ ಪ್ರತಿಭಟನಾಕಾರರೊಬ್ಬರು ಇಸ್ಲಾಮಿಕ್ ಆಡಳಿತವನ್ನು ಧಿಕ್ಕರಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ವೃದ್ಧ ಮಹಿಳೆಯು ಬಾಯಿಯಿಂದ ರಕ್ತಸ್ರಾವ ಆಗುತ್ತಿದ್ದರೂ ಲೆಕ್ಕಿಸದೇ ತೆಹರಾನ್ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಾ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತಿರುವುದು ಕಂಡುಬಂದಿದೆ. ಇದು ಖಮೇನಿ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶ ಹಾಗೂ ಆರ್ಥಿಕ ಸಂಕಷ್ಟದಿಂದ ಉದ್ಭವಿಸಿರುವ ರಾಷ್ಟ್ರವ್ಯಾಪಿ ಆಂದೋಲನ ಎನ್ನಲಾಗಿದೆ. ಅಷ್ಟೇ ಅಲ್ಲದೇ ಆ ಮಹಿಳೆ “ನನಗೆ ಯಾವುದೇ ಭಯವಿಲ್ಲ.ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ,” ಎಂದು ಕೂಗುತ್ತಿರುವುದು ಆ ವಿಡಿಯೋದಲ್ಲಿ ಕಾಣಿಸಿದೆ.
ಇರಾನಿನ ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾದ ಮಸೀಹ್ ಅಲಿನೇಜಾದ್ ಅವರು ಈ ವಿಡಿಯೋವನ್ನು ಸಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ನನಗೆ ಯಾವುದೇ ಭಯವಿಲ್ಲ. ನಾನು 47 ವರ್ಷಗಳ ಹಿಂದೆಯೇ ಸತ್ತಿದ್ದೇನೆ. ಇದು ಇಸ್ಲಾಮಿಕ್ ಗಣರಾಜ್ಯದಿಂದ ಬೇಸತ್ತಿರುವ ಇರಾನ್ ಮಹಿಳೆಯ ಧ್ವನಿ,” ಎಂದು ಬರೆದುಕೊಂಡಿದ್ದಾರೆ. “47 ವರ್ಷಗಳ ಹಿಂದೆ ಇಸ್ಲಾಮಿಕ್ ಗಣರಾಜ್ಯ ನಮ್ಮ ಹಕ್ಕುಗಳನ್ನು ಕಸಿದುಕೊಂಡು ಒಂದು ರಾಷ್ಟ್ರವನ್ನೇ ಒತ್ತೆಯಾಳನ್ನಾಗಿ ಮಾಡಿಕೊಂಡಿತು. ಇಂದು ಇಲ್ಲಿಯ ಜನರಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಈಗ ಅವರು ದೌರ್ಜನ್ಯದ ವಿರುದ್ಧ ಎದ್ದು ನಿಂತಿದ್ದಾರೆ…ಇರಾನ್ ‘ಪುಟಿದೆದ್ದಿದೆ,” ಎಂದು ಮಸೀಹ್ ಅಲಿನೇಜಾದ್ ಹೇಳಿದ್ದಾರೆ.
