ಉದಯವಾಹಿನಿ, ಚಳಿಗಾಲವೆಂದರೆ ದೂರು ದುಮ್ಮಾನಗಳ ಪಟ್ಟಿಯನ್ನೇ ಮುಂದಿಡುವವರು ಹಲವರಿದ್ದಾರೆ. ಇರಲಿ ಎಲೆಗಳೆಲ್ಲ ಉದುರಿ ಬೋಳಾಗಿ, ಪ್ರಾಣಿಗಳೆಲ್ಲ ಗೂಡು, ಬಿಲ, ಮರೆಗಳನ್ನು ಸೇರಿ ಇಡೀ ವಾತಾವರಣದಲ್ಲಿ ಹೆಪ್ಪುಗಟ್ಟಿದಂಥ ಮೌನವೊಂದು ಕಾಣುತ್ತದೆ. ಆದರೆ ಚಳಿಗಾಲ ಮುಗಿಯುತ್ತಿದ್ದಂತೆ ಬರುವ ವಸಂತದಲ್ಲಿ ಎಲ್ಲೆಡೆ ಚಿಗುರು, ಹೂವು, ಚಿಲಿಪಿಲಿ, ಝೇಂಕಾರದ ಹಿತವಾದ ಗದ್ದಲ ತುಂಬಿಹೋಗುತ್ತದೆ. ಅಂದರೆ ಚಳಿಗಾಲ ಎನ್ನುವುದು ನಮ್ಮನ್ನು ನಾವು ಪೋಷಿಸಿಕೊಳ್ಳುವ ಕಾಲ ಎನ್ನುವುದನ್ನು ಪ್ರಕೃತಿ ನಮಗೆ ಸೂಚಿಸುತ್ತಿದೆ. ಯಾವುದೇ ಅತಿರೇಕದ ಕೆಲಸಗಳಿಗೆ ಕೈಯಿಕ್ಕದೆ, ನಮ್ಮ ಚಟುವಟಿಕೆಗಳನ್ನು ಒಂದು ಹದಕ್ಕೆ ಇಳಿಸಿಕೊಂಡು, ಬೆಚ್ಚಗೆ ನೆಮ್ಮದಿಯಿಂದ ಇರೋಣ ಎನ್ನುವ ಸಂದೇಶವನ್ನು ನಾವೂ ರೂಢಿಸಿಕೊಂಡರೆ ಹೇಗೆ? ಇದಕ್ಕೇನು ಮಾಡಬೇಕು?
ಜೀರ್ಣ ಕ್ರಿಯೆ: ಈ ದಿನಗಳಲ್ಲಿ ಕ್ರಿಸ್‌ಮಸ್‌, ಹೊಸವರ್ಷ ಎನ್ನತ್ತ ಪಾರ್ಟಿಗಳ ಭರಾಟೆ ಹೆಚ್ಚು. ಅದಕ್ಕಾಗಿ ಸಿಕ್ಕಿದ್ದೆಲ್ಲಾ ತಿನ್ನುವುದೂ ಅಧಿಕ. ಪಾರ್ಟಿ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಆಹಾರಗಳತ್ತ ಗಮನ ನೀಡಿ. ರುಚಿಯಾದ ಖಿಚಡಿ, ಖಾರ ಪೊಂಗಲ್‌, ತರಹೇವಾರಿ ತರಕಾರಿ-ಬೇಳೆ-ಕಾಳುಗಳ ಸೂಪ್‌ಗಳು, ಬಿಸಿಯಾದ ಕಷಾಯಗಳು, ಘಮಘಮಿಸುವ ಗ್ರೀನ್‌ ಟೀಗಳು, ಶುಂಠಿ, ಜೀರಿಗೆ, ದಾಲ್ಚಿನ್ನಿ, ಕಾಳುಮೆಣಸು, ಹಸಿ ಅರಿಶಿನ ಮುಂತಾದ ಪರಿಮಳಯುಕ್ತ ಮಸಾಲೆಗಳು- ಇವೆಲ್ಲ ಚಳಿಗಾಲದಲ್ಲಿ ಜಠರಾಗ್ನಿಯನ್ನು ತೀಕ್ಷ್ಣಗೊಳಿಸುವಂಥವು. ಆಹಾರವನ್ನು ಆದಷ್ಟು ಬಿಸಿ ಮತ್ತು ತಾಜಾ ಇದ್ದಾಗಲೇ ಸೇವಿಸಿ. ತಂಗಳಾದ ಆಹಾರಗಳು ಈ ಕಾಲಕ್ಕೆ ಸೂಕ್ತವಲ್ಲ.
ಪೇಯಗಳು: ಚಳಿಗಾಲದಲ್ಲಿ ಬೆಚ್ಚಗಿನ ಅಥವಾ ಬಿಸಿ ಪೇಯಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಸುಮ್ಮನೆ ಬಿಸಿನೀರು ಕುಡಿಯಲಾಗದು, ರೋಗ ಬಂದಂತೆ ಎನಿಸುತ್ತದೆ ಎಂದು ಗೊಣಗುವವರಿದ್ದಾರೆ. ಬಿಸಿಯಾದ ಹರ್ಬಲ್‌ ಚಹಾಗಳು, ಗ್ರೀನ್‌ ಟೀ, ಸೂಪ್‌ಗಳು, ಕಷಾಯಗಳು- ಇಂಥ ಎಲ್ಲವನ್ನೂ ಹೆಚ್ಚು ಸಮಯ ಮತ್ತು ಖರ್ಚಿಲ್ಲದೆ ಮನೆಯಲ್ಲೇ ಬೇಕಾದಂತೆ ತಯಾರಿಸಿಕೊಳ್ಳಬಹುದು. ಇಂಥ ಪೇಯಗಳು ಶರೀರವನ್ನು ಬೆಚ್ಚಗಿರಿಸುವುದರ ಜತೆಗೆ ನರಗಳನ್ನು ಶಾಂತಗೊಳಿಸಿ, ಸೊಂಪಾಗಿ ನಿದ್ದೆ ತರಿಸುತ್ತವೆ. ದೇಹವನ್ನು ಪೋಷಿಸುವುದಕ್ಕೆ ಇಂಥವು ಅತ್ಯಂತ ಆವಶ್ಯಕ.

ಅಭ್ಯಂಗ: ಇದು ಭಾರತೀಯ ಸಾಂಸ್ಕೃತಿ ಬದುಕಿನ ಬೇರ್ಪಡಿಸಲಾಗದ ಭಾಗ. ಚಳಿಗಾಲದಲ್ಲಿ ಕಾಡುವ ಯಾವುದೇ ಬಗೆಯ ಚರ್ಮದ ತೊಂದರೆಗಳನ್ನು ಸಾದ್ಯಂತವಾಗಿ ನಿವಾರಿಸಿಕೊಡುವ ಶಕ್ತಿಯನ್ನು ಅಭ್ಯಂಜನ ಹೊಂದಿದೆ. ಅದೊಂದೇ ಅಲ್ಲ, ಕೀಲುಗಳನ್ನು ನೋವು ಮುಕ್ತಗೊಳಿಸಲು, ಉದುರುವ ಕೂದಲುಗಳನ್ನು ಸೊಂಪಾಗಿಸಲು, ಕಣ್ತುಂಬಾ ನಿದ್ದೆ ಬರಿಸಲು, ರಕ್ತ ಪರಿಚಲನೆಯನ್ನು ಉತ್ತೇಜಿಸಲು, ಜಡವಾದ ಹಸಿವನ್ನು ಕೆರಳಿಸಲು- ಹೀಗೆ ಬಹಳಷ್ಟು ಉಪಕಾರಗಳನ್ನು ಮಾಡಲು ಎಣ್ಣೆಸ್ನಾನಕ್ಕೆ ಸಾಧ್ಯವಿದೆ. ಉಗುರು ಬಿಸಿಯ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹದವಾಗಿ ಮೈಗೆಲ್ಲ ಒತ್ತಿ ಉಜ್ಜಿಕೊಳ್ಳುವುದು ಬಹಳಷ್ಟು ಬಗೆಯಲ್ಲಿ ದೇಹ-ಮನಸ್ಸುಗಳನ್ನು ಪೋಷಿಸಬಲ್ಲದು.

Leave a Reply

Your email address will not be published. Required fields are marked *

error: Content is protected !!