
ಉದಯವಾಹಿನಿ, ಮುಂಬೈ: ಜಾಗತಿಕ ಮಟ್ಟದಲ್ಲಿ ಅಕ್ಕಿಯ ಪೂರೈಕೆ ಗಣನೀಯ ಕುಸಿತ ಕಂಡ ಬೆನ್ನಲ್ಲೇ ಹಲವು ರಾಷ್ಟ್ರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಅಕ್ಕಿಯ ಉತ್ಪಾದನೆಯಲ್ಲಿ 20 ವರ್ಷಗಳಲ್ಲೇ ಇದು ದಾಖಲೆ ಕುಸಿತ ಎಂದು ವಿಶ್ಲೇಷಿಸಲಾಗಿದೆ.
ಜಾಗತಿ ಮಟ್ಟದಲ್ಲಿ 2022-23ರಲ್ಲಿ ಸುಮಾರು 8.7 ದಶಲಕ್ಷ ಟನ್ ನಷ್ಟು ಅಕ್ಕಿಯ ಉತ್ಪಾದನೆ ಕುಸಿತ ಕಂಡಿದೆ.ಇದರ ಬೆನ್ನಲ್ಲೇ ಜಗತ್ತಿನಲ್ಲೇ ಚೀನಾ ನಂತರ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಭಾರತದಲ್ಲೂ ಶೇ 40ರಷ್ಟು ಅಕ್ಕಿ ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ ಬಾಸುಮತಿ ಹಾಗೂ ಕುಚಲಕ್ಕಿ ಹೊರತುಪಡಿಸಿ ಉಳಿದ ಬಗೆಯ ಅಕ್ಕಿಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಅಕ್ಕಿ ಬೆಲೆ ಏರುಮುಖವಾಗಿದೆ. ಎಲ್ ನಿನೊದಿಂದ ಉಂಟಾಗಿರುವ ಮಳೆ ಅಭಾವ, ರಷ್ಯಾ- ಉಕ್ರೇನ್ ಯುದ್ಧ ಹಾಗೂ ಕೋವಿಡ್‌ನಿಂದಾಗಿ ಜಗತ್ತಿನ ಪ್ರಮುಖ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಕಡಿಮೆಯಾಗಿ ವ್ಯಾಪಕ ಬೇಡಿಕೆ ಹೆಚ್ಚಾಗಿದೆ. ಜಗತ್ತಿನಲ್ಲೇ ಅಕ್ಕಿ ಪೂರೈಕೆಯಲ್ಲಿ ಭಾರತ ಶೇ 40ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಅಕ್ಕಿ ಆಮದು ಮೇಲೆ ಅವಲಂಬಿತ ರಾಷ್ಟ್ರಗಳಲ್ಲಿ ಹಾಹಾಕಾರ ಉಂಟಾಗಿದೆ. ಅಮೆರಿಕದಲ್ಲಿ ಮಳಿಗೆಗಳು ಹಾಗೂ ಸೂಪರ್ ಮಾರುಕಟ್ಟೆಯ ಎದುರು ಅಕ್ಕಿಗಾಗಿ ಸರತಿ ಸಾಲಿನಲ್ಲಿ ಜನರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಆಫ್ರಿಕಾದ ರಾಷ್ಟ್ರಗಳು, ಟರ್ಕಿ, ಸಿರಿಯಾ, ಪಾಕಿಸ್ತಾನಗಳಿಗೂ ಅಕ್ಕಿಯ ಅಭಾವ ತೀವ್ರವಾಗಿ ಬಾಧಿಸಲಿದೆ ಎಂದು ಅಂದಾಜಿಸಲಾಗಿದೆ.
