ಉದಯವಾಹಿನಿ , : ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದ ದಿನದಂದು ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ನಿರ್ಮಾಪಕಿ ಹಾಗೂ ವಿತರಕಿಯಾಗಿರುವ ಪ್ರಿಯಾ ಸುದೀಪ್, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ.
ಸುದೀಪ್ ಅವರು ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗುತ್ತಿದ್ದಾರೆ. ಅಲ್ಲದೇ, ಇತ್ತೀಚೆಗೆ ಮ್ಯಾಕ್ಸ್ ಚಿತ್ರದ ವಿತರಣೆ ಮಾಡುವ ಮೂಲಕ ವಿತರಣೆ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ತಮ್ಮದೇ ಸುಪ್ರಿಯಾನ್ವಿ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ತೀರ್ಮಾನ ಮಾಡಿದ್ದಾರೆ.
ಪ್ರಿಯಾ ಸುದೀಪ್ ಹುಟ್ಟುಹಬ್ಬಕ್ಕೆ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾ ಸುದೀಪ್, ಹೆಮ್ಮೆ ಮತ್ತು ಉತ್ಸಾಹದಿಂದ, ನಾವು ತಾಯಿ ಭದ್ರಕಾಳಿಯ ಪವಿತ್ರ ಆಶೀರ್ವಾದ ಮತ್ತು ನಮ್ಮ ಮೌಲ್ಯಯುತ ಪ್ರೇಕ್ಷಕರ ಆತ್ಮೀಯ ಪ್ರೋತ್ಸಾಹವನ್ನು ಕೋರುತ್ತೇವೆ. ನಾವು ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೋಷನ್ ಪೋಸ್ಟರ್ ಅನ್ನು ಪ್ರಸ್ತುತಪಡಿಸುತ್ತೇವೆ. ಈ ಕ್ಷಣವು ಬಲವಾದ ವಿಷಯ, ಹೊಸ ಧ್ವನಿಗಳು ಮತ್ತು ಪ್ರಭಾವಶಾಲಿ ಸಿನಿಮಾಗಳಿಗೆ ಮೀಸಲಾಗಿರುವ ಸೃಜನಾತ್ಮಕ ವೇದಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಅರ್ಥಪೂರ್ಣ ಸಿನಿಮಾ ಮತ್ತು ಶಕ್ತಿಯುತ ಕಥೆಗಳ ಭರವಸೆಯೊಂದಿಗೆ ಮುಂದುವರಿಯುತ್ತದೆ.
