ಉದಯವಾಹಿನಿ , ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಗ್ರೀನ್ ಟೀ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಟೆಚಿನ್ಸ್ ಎಂಬ ವಿಶೇಷ ಸಂಯುಕ್ತಗಳು ಇರುತ್ತವೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಂಯುಕ್ತಗಳು ಚಯಾಪಚಯ ಕ್ರಿಯೆಯನ್ನ ವೇಗಗೊಳಿಸುತ್ತದೆ, ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ ಮತ್ತು ಮನಸ್ಸನ್ನ ಸಕ್ರಿಯವಾಗಿರಿಸುತ್ತದೆ. ಚಯಾಪಚಯ ಕ್ರಿಯೆ ಉತ್ತಮವಾಗಿದ್ದಾಗ, ತೂಕ ಇಳಿಸುವುದು ಸುಲಭ. ಗ್ರೀನ್ ಟೀಯಲ್ಲಿ ಸಣ್ಣ ಪ್ರಮಾಣದಲ್ಲಿ ಕೆಫೀನ್ ಮತ್ತು ಪೊಟ್ಯಾಸಿಯಮ್ ಇದ್ದು, ಇದು ದೇಹಕ್ಕೆ ಶಕ್ತಿಯನ್ನ ನೀಡುತ್ತದೆ. ಆದರೆ ಸರಿಯಾದ ಸಮಯದಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಮಾತ್ರ ಅವುಗಳ ಪ್ರಯೋಜನಗಳನ್ನ ಪಡೆಯಬಹುದು.
ಗ್ರೀನ್ ಟೀ ಕುಡಿಯಲು ಉತ್ತಮ ಸಮಯ: ಗ್ರೀನ್ ಟೀ ಕುಡಿಯಲು ಉತ್ತಮ ಸಮಯದ ಯಾವುದು ಎಂಬುದರ ಬಗ್ಗೆ ಅನೇಕರಿಗೆ ಗೊಂದಲ ಇರುತ್ತದೆ. ಇದಕ್ಕೆ ಇಂದು ನಾವು ಉತ್ತರ ನೀಡಲಿದ್ದೇವೆ. ಬೆಳಗ್ಗೆ ಅಥವಾ ವ್ಯಾಯಾಮದ ಮೊದಲು ಗ್ರೀನ್ ಟೀ ಕುಡಿಯುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಬೆಳಗ್ಗೆ ಕಾಫಿಗೆ ಬದಲಾಗಿ ಗ್ರೀನ್ ಟೀ ಕುಡಿಯುವುದರಿಂದ ದಿನವಿಡೀ ತಾಜಾತನವನ್ನ ಕಾಪಾಡಿಕೊಳ್ಳಬಹುದು. ಇದರಲ್ಲಿ ಸಣ್ಣ ಪ್ರಮಾಣದ ಕೆಫೀನ್ ಮತ್ತು ಎಲ್-ಥಿಯಾನೈನ್ ಇರುತ್ತದೆ, ಇದು ಮನಸ್ಥಿತಿಯನ್ನ ಹೆಚ್ಚಿಸುತ್ತದೆ ಮತ್ತು ಏಕಾಗ್ರತೆಯನ್ನ ಸುಧಾರಿಸುತ್ತದೆ.
ತೂಕ ಇಳಿಸಿಕೊಳ್ಳುವುದು ಅಥವಾ ಫ್ಯಾಟ್ ಬರ್ನ್ ಮಾಡುವುದು ನಿಮ್ಮ ಗುರಿಯಾಗಿದ್ದರೆ, ವ್ಯಾಯಾಮ ಮಾಡುವ ಮೊದಲು ಗ್ರೀನ್ ಟೀ ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ವ್ಯಾಯಾಮದ ಸಮಯದಲ್ಲಿ ಕೊಬ್ಬನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಯಾವಾಗ ಗ್ರೀನ್ ಟೀ ಕುಡಿಯಬಾರದು?: ಊಟವಾದ ತಕ್ಷಣ ಗ್ರೀನ್ ಟೀ ಕುಡಿಯುವುದು ಒಳ್ಳೆಯದಲ್ಲ. ಗ್ರೀನ್ ಟೀಯಲ್ಲಿರುವ ಕೆಲವು ಸಂಯುಕ್ತಗಳು ದೇಹವು ಆಹಾರದಿಂದ ಖನಿಜಗಳನ್ನ ಹೀರಿಕೊಳ್ಳುವುದನ್ನ ತಡೆಯುತ್ತದೆ. ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಸಹ ಹಾನಿಕಾರಕ. ಏಕೆಂದರೆ ಅದರಲ್ಲಿರುವ ಕೆಫೀನ್ ಅಂಶವು ನಿದ್ರಾಹೀನತೆ, ಆತಂಕ, ಅಧಿಕ ರಕ್ತದೊತ್ತಡ ಮತ್ತು ನರಗಳ ಒತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ ಸರಿಯಾದ ಸಮಯದಲ್ಲಿ ಮತ್ತು ಮಿತವಾಗಿ ಗ್ರೀನ್ ಟೀ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
