ಉಯವಾಹಿನಿ, ನವಿ ಮುಂಬಯಿ, : 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ನ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು ಕಂಡರೂ, ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ದಾಖಲೆಯೊಂದನ್ನು ಬರೆದಿದ್ದಾರೆ.

ಹರ್ಮನ್‌ಪ್ರೀತ್ ಕೌರ್ 20 ರನ್ ಗಳಿಸುವ ಮೂಲಕ WPL ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಕುತೂಹಲಕಾರಿಯಾಗಿ, ಅನುಭವಿ ಬ್ಯಾಟ್ಸ್‌ಮನ್ ಈಗ 871 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ 865 ರನ್ ಗಳಿಸಿರುವ ಶಫಾಲಿ ವರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟಾರೆಯಾಗಿ, WPL ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ನ್ಯಾಟ್ ಸಿವರ್-ಬ್ರಂಟ್(1031) , ಎಲಿಸ್ ಪೆರ್ರಿ(972) ಮತ್ತು ಮೆಗ್ ಲ್ಯಾನಿಂಗ್(972) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿವೈ ಪಾಟೀಲ್‌ ಸ್ಪೋಟ್ಸ್‌ ಅಕಾಡೆಮಿ ಮೈದಾನದಲ್ಲಿ ನಡೆದ 2026ರ ಆವೃತ್ತಿಯ ಮೊದಲ ಡಬ್ಲ್ಯುಪಿಎಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ 6 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಪ್ರತಿಯಾಗಿ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್‌ ಬಾರಿಸಿ ಶುಭಾರಂಭ ಮಾಡಿತು.
ಕೊನೇ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 18 ರನ್‌ಗಳು ಬೇಕಿದ್ದವು. ಅದಾಗಲೇ 7 ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ಆ ಕ್ಷಣದಲ್ಲಿ ಡಿ ಕ್ಲರ್ಕ್‌ ಮೇಲೆ ಮಾತ್ರವೇ ಕೊಂಚ ವಿಶ್ವಾಸವಿಟ್ಟಿತ್ತು. ಆದರೆ, ಬ್ರಂಟ್‌ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಇದರಿಂದಾಗಿ ಕೊನೇ 4 ಎಸೆತಗಳಲ್ಲಿ 18 ರನ್‌ ಬಾರಿಸುವ ಅವಶ್ಯಕತೆ ಇತ್ತು. ಈ ಹಂತದಲ್ಲಿ ಸಿಡಿದು ನಿಂತ ಡಿ ಕ್ಲರ್ಕ್‌, 3ನೇ ಎಸೆತವನ್ನು ಲಾಂಗ್‌ ಆಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರೆ, ಮರು ಎಸೆತದಲ್ಲಿ ಬ್ಯಾಕ್‌ವರ್ಡ್‌ ಆಫ್‌ ಸ್ಕ್ವೇರ್‌ನಲ್ಲಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕ ಪೂರೈಸಿದರು. ನಂತರ ಎಸೆತವನ್ನು ಕೌ ಕಾರ್ನರ್‌ಗೆ ಸಿಕ್ಸರ್‌ಗೆ ಅಟ್ಟಿದಾಗ ಆರ್‌ಸಿಬಿಗೆ ಕೊನೇ ಎಸೆತದಲ್ಲಿ 2 ರನ್‌ಬಾರಿಸುವ ಅವಶ್ಯಕತೆ ಬಂದಿತು. ಕೊನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರೋಚಕ ಗೆಲವು ತಂದರು.

Leave a Reply

Your email address will not be published. Required fields are marked *

error: Content is protected !!