ಉಯವಾಹಿನಿ, ಭಾರತದಲ್ಲಿ ಮಧುಮೇಹ ಪೀಡಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವೃದ್ಧರು ಮಾತ್ರವಲ್ಲದೆ, ಯುವಕರು ಮತ್ತು ಮಕ್ಕಳೂ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ತಜ್ಞರ ಪ್ರಕಾರ, ಭಾರತದಲ್ಲಿ ಮಧುಮೇಹ ಪೀಡಿತರ ಸಂಖ್ಯೆ ಈಗಾಗಲೇ 1.5 ಕೋಟಿಗೂ ಹೆಚ್ಚು ಇದೆ. ಮಧುಮೇಹ ಎಂದರೆ ಕೇವಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಮಾತ್ರವಲ್ಲ. ಇದು ದೇಹದ ಒಳಾಂಗಗಳಿಗೆ ಹಾನಿ ಮಾಡುತ್ತದೆ. ರೋಗನಿರೋಧಕ ಶಕ್ತಿ ಕುಗ್ಗುವುದು, ಗಾಯಗಳು ತಡವಾಗಿ ವಾಸಿಯಾಗುವುದು, ಕಣ್ಣು, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳು ಉಂಟಾಗುವ ಅಪಾಯವಿದೆ.

ಮಧುಮೇಹ ನಿಯಂತ್ರಣಕ್ಕೆ ಔಷಧಿಗಳು ಅಗತ್ಯವಾದರೂ, ಜೀವನಶೈಲಿ ಬದಲಾವಣೆ ಮತ್ತು ಆಹಾರ ಕ್ರಮವೂ ಮಹತ್ವದ್ದಾಗಿದೆ. ಇದರ ಜೊತೆಗೆ ಕೆಲವರು ನೈಸರ್ಗಿಕ ವಿಧಾನಗಳತ್ತ ಮುಖ ಮಾಡುತ್ತಿದ್ದಾರೆ. ಅಂತಹ ಒಂದು ವಿಧಾನವೇ ಇನ್ಸುಲಿನ್ ಸಸ್ಯ ಬಳಕೆ.

ಆಯುರ್ವೇದದಲ್ಲಿ ಇನ್ಸುಲಿನ್ ಸಸ್ಯವನ್ನು ಔಷಧೀಯ ಗುಣ ಹೊಂದಿರುವ ಸಸ್ಯವೆಂದು ಪರಿಗಣಿಸಲಾಗಿದೆ. ವೈಜ್ಞಾನಿಕವಾಗಿ ಇದನ್ನು Costus igneus ಎಂದು ಕರೆಯಲಾಗುತ್ತದೆ. ಈ ಸಸ್ಯದ ಎಲೆಗಳಲ್ಲಿ ಇರುವ ನೈಸರ್ಗಿಕ ಸಂಯುಕ್ತಗಳು ದೇಹದಲ್ಲಿ ಗ್ಲೂಕೋಸ್ ಬಳಕೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಈ ಎಲೆಗಳಲ್ಲಿ ಇರುವ ಕ್ಲೋರೋಜೆನಿಕ್ ಆಮ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಕೆಲವು ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ತಾಜಾ ಎಲೆಗಳನ್ನು ಅಗಿಯುವ ಅಭ್ಯಾಸವನ್ನು ಅನುಸರಿಸುತ್ತಾರೆ. ಇದರಿಂದ ಇನ್ಸುಲಿನ್ ಪ್ರತಿರೋಧ, ತೂಕ ನಿಯಂತ್ರಣ ಮತ್ತು PCOS ಸಮಸ್ಯೆಗೆ ಸಹಾಯವಾಗಬಹುದು ಎಂಬ ನಂಬಿಕೆ ಇದೆ.

ಆದರೆ ಇನ್ಸುಲಿನ್ ಸಸ್ಯವು ಮಧುಮೇಹ ಔಷಧಿಗಳಿಗೆ ಪರ್ಯಾಯವಲ್ಲ ಎಂಬುದನ್ನು ಮರೆಯಬಾರದು. ಈಗಾಗಲೇ ಶುಗರ್‌ ಮಾತ್ರೆಗಳು ಅಥವಾ ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಬಳಸಬಾರದು. ಮಧುಮೇಹವನ್ನು ನಿಯಂತ್ರಿಸಲು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ಸಲಹೆಯೇ ಅತ್ಯಂತ ಮುಖ್ಯ.

Leave a Reply

Your email address will not be published. Required fields are marked *

error: Content is protected !!