ಉದಯವಾಹಿನಿ, ಗದಗ: ಅದು ಐತಿಹಾಸಿಕ ಗ್ರಾಮ.. ದೇವಾಲಯಗಳ ಸ್ವರ್ಗ.. ಶಿಲ್ಪ ಕಲೆಯ ತೊಟ್ಟಿಲು.. ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ ಆ ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳ ಐತಿಹಾಸಿಕ ಪ್ರತೀತಿ ಇದೆ. ಆ ಗ್ರಾಮದಲ್ಲಿ ಮನೆ ಕಟ್ಟಡದ ಪಾಯ ತೆಗೆಯುವ ವೇಳೆ ಹೊನ್ನಿನ ನಿಧಿ ಪತ್ತೆಯಾಗಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ತಾಯಿ, ಮಗನಿಗೆ ಸನ್ಮಾನ ಮಾಡಲಾಗಿದೆ. ಸದ್ಯ ಚಿನ್ನಾಭರಣ ಪುರಾತತ್ವ ಇಲಾಖೆ ಕೈಸೇರಿದ್ದು ಲಕ್ಕುಂಡಿ ಗುಪ್ತನಿಧಿಯ ವಾರಸುದಾರರು ಯಾರು? ಕುತೂಹಲ ಹೆಚ್ಚಿಸಿದೆ.
470 ಗ್ರಾಂ ಚಿನ್ನ, ವಜ್ರದ ಆಭರಣಗಳು ಪತ್ತೆ
ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ (Gold Treasure) ಪತ್ತೆಯಾಗಿದೆ. ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಪಾಯ ಅಗೆಯುವ ಸಂದರ್ಭದಲ್ಲಿ, ಪ್ರಜ್ವಲ್ ರಿತ್ತಿ ಎಂಬ 8 ವರ್ಷದ ಮಗನಿಗೆ ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣ ಸಿಕ್ಕಿವೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್‌ಗೆ ವಿಷಯ ತಿಳಿಸಿದ್ದಾನೆ. ಬಳಿಕ ಸಿದ್ದು ಪಾಟೀಲ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್‌ಗೆ (HK Patil) ಮಾಹಿತಿ ರವಾನಿಸಿದ್ರು ಹೆಚ್.ಕೆ ಪಾಟೀಲ್ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.
