ಉದಯವಾಹಿನಿ, ಇಸ್ಲಾಮಾಬಾದ್: ಭಾರತಕ್ಕೆ ನನ್ನನ್ನು ಕಂಡರೆ ಭಯ, ಪಾಕ್ ಸೇನೆಯಿಂದ ನನಗೆ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ ಬಡಾಯಿ ಕೊಚ್ಚಿಕೊಂಡಿದ್ದಾನೆ. ಪಾಕಿಸ್ತಾನದ ಶಾಲೆಯೊಂದರ ಸಮಾರಂಭದಲ್ಲಿ ಶಾಲಾ ಮಕ್ಕಳನ್ನು ಉದ್ದೇಶಿಸಿ ಆತ ಮಾತನಾಡಿದ್ದಾನೆ. ನನ್ನ ಉಪಸ್ಥಿತಿಯಿಂದಾಗಿ ಭಾರತ ಭಯಭೀತವಾಗಿದೆ. ಪಾಕಿಸ್ತಾನ ಸೇನೆಯ ಕಾರ್ಯಕ್ರಮಗಳಿಗೆ ನನಗೆ ಆಹ್ವಾನಗಳು ಬರುತ್ತಿವೆ. ಸೈನಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗುತ್ತಿದೆ ಎಂದಿದ್ದಾನೆ. ಈ ಮೂಲಕ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಪಾಕ್ ಸೇನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಒಪ್ಪಿಕೊಂಡಿದ್ದಾನೆ.
ಭಾರತ ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವ ಮೂಲಕ ಭಾರತ ತಪ್ಪು ಮಾಡಿದೆ. ಕಾಶ್ಮೀರ ಕಾರ್ಯಾಚರಣೆಯಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದಿದ್ದಾನೆ. ಕಸೂರಿ ಸಭೆಯನ್ನುದ್ದೇಶಿಸಿ ಮಾತನಾಡಿರುವ ವೀಡಿಯೋ ಈಗ ವೈರಲ್ ಆಗಿದೆ. ಇದರಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುವ ಪಾಕಿಸ್ತಾನದ ಸುಳ್ಳಿನ ಮುಖವಾಡ ಕಳಚಿದೆ. ಮಿಲಿಟರಿ ಮತ್ತು ನಿಷೇಧಿತ ಗುಂಪುಗಳ ನಡುವಿನ ಸಹಕಾರವನ್ನು ಈ ವೀಡಿಯೋ ಸ್ಪಷ್ಟವಾಗಿ ತೋರಿಸುತ್ತಿದೆ.
