ಉದಯವಾಹಿನಿ, ರಾಮನಗರ: ರಣಹದ್ದು ಬಗ್ಗೆ ತಪ್ಪಾದ ಹೇಳಿಕೆ ನೀಡಿರೋ ಆರೋಪದಡಿ ಬಿಗ್ ಬಾಸ್ ಹಾಗೂ ನಟ ಕಿಚ್ಚ ಸುದೀಪ್ ವಿರುದ್ಧ ಪರಿಸರ ಪ್ರಿಯರು ದೂರು ನೀಡಿದ್ದಾರೆ. ರಾಮನಗರದ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ದೂರು ನೀಡಲಾಗಿದ್ದು, ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋವೊಂದನ್ನ ಹಾಕಿಸಿ ʻಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂ ಲಬಕ್ ಅಂತ ಹಿಡಿಯುವವರು ಯಾರು?ʼ ಎಂದು ಕೇಳಿದ್ದರು. ಆದರೆ ರಣಹದ್ದು ಯಾವುದೇ ಜೀವಿಗೆ ಹಾನಿ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇದು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಇಂತಹ ಪಕ್ಷಿ ಬಗ್ಗೆ ಜನಪ್ರಿಯ ನಟ ಸುದೀಪ್ ಅವರು ತಪ್ಪು ಮಾಹಿತಿ ನೀಡೋದು ಸರಿಯಲ್ಲ ಎಂದಿದ್ದಾರೆ.
ಅಳಿವಿನಂಚಿನಲ್ಲಿರೋ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ನಟ ಸುದೀಪ್ ಅವರಿಗೆ ರಣಹದ್ದು ಬಗ್ಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಮನ್ಸೂರ್ ಅವರಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.
