ಉದಯವಾಹಿನಿ, ಅತಿಯಾದರೆ ಅಮೃತವೂ ವಿಷವೇ! ಇದು ಆಹಾರದ ವಿಷಯದಲ್ಲೂ ಸತ್ಯ. ಯಾವುದೇ ಪೋಷಕಾಂಶ ಏಕಪ್ರಕಾರವಾಗಿ ದೇಹಕ್ಕೆ ದೊರೆಯುತ್ತಿದ್ದರೆ, ಅದು ದೇಹದ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ, ಹೊಸ ಸಮಸ್ಯೆ ಆರಂಭವಾಗುವುದಕ್ಕೆ ಅಷ್ಟು ಸಾಕು. ಉದಾ, ದೇಹಕ್ಕೆ ನಾರು ಬೇಕು. ಈ ಪೋಷಕಾಂಶ ಉಳಿದ ಆಹಾರಗಳೊಂದಿಗೆ ಸಮನ್ವಯದಲ್ಲಿದ್ದರೆ- ಹೊಟ್ಟೆ ಸ್ವಚ್ಛವಿರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತದೆ, ಮಧುಮೇಹ ಹತೋಟಿಗೆ ಅನುಕೂಲವಾಗುತ್ತದೆ, ತೂಕ ಇಳಿಕೆ ಸೈ, ಬರಬಾರದ ರೋಗಗಳನ್ನೆಲ್ಲಾ ದೂರ ಇರಿಸಿ ದೀರ್ಘಾಯುವಾಗಲು ನೆರ ವಾಗುತ್ತದೆ.
ನಮಗೆ ನಾರಿನ ಸತ್ವಗಳು ಹೆಚ್ಚಾಗಿ ದೊರೆಯುವುದು ಬೇಳೆ-ಕಾಳುಗಳು, ಇಡೀ ಧಾನ್ಯಗಳು, ಹಣ್ಣು-ತರಕಾರಿಗಳಿಂದ. ಮಹಿಳೆಯರಿಗೆ ದಿನವೊಂದಕ್ಕೆ ಸುಮಾರು 22ರಿಂದ 26 ಗ್ರಾಂಗಳಷ್ಟು ನಾರು ಬೇಕಾದರೆ, ಪುರುಷರಿಗೆ ಈ ಪ್ರಮಾಣ 30ರಿಂದ 36ಗ್ರಾಂಗಳಷ್ಟು. ದಿನಕ್ಕಿಷ್ಟು ಬೇಕು ಎಂಬಂತೆ ಒಂದೇ ಸಮ ತೌಡು ತಿನ್ನುತ್ತಾ ಕುಳಿತರೆ ಆರೋಗ್ಯ ಬುಡಮೇಲಾಗಲು ಎಷ್ಟೊತ್ತು ಬೇಕು? ಎಲ್ಲವೂ ಮಿತಿಯಲ್ಲಿದ್ದರೆ ಸರಿ; ಹಾಗಾಗಿ ದಿನಕ್ಕೆ ಅಗತ್ಯವಿರುವ ಪ್ರಮಾಣವನ್ನು ಆಹಾರ ಗಳುದ್ದಕ್ಕೂ ಹಂಚುವುದು ಸರಿಯಾದ ಕ್ರಮ. ಅಂದರೆ ಬೆಳಗಿನ ತಿಂಡಿಗೆ ಇದಿಷ್ಟು, ಮಧ್ಯಾಹ್ನ ಇನ್ನಷ್ಟು, ರಾತ್ರಿಗೆ ಉಳಿದಷ್ಟು ಎಂಬಂತೆ. ಒಂದೊಮ್ಮೆ ಸೇವಿಸಿದ ನಾರಿನಂಶ ಹೆಚ್ಚಾದರೆ, ಏನಿದರ ಪಾರ್ಶ್ವ ಪರಿಣಾಮಗಳು?
ಹೊಟ್ಟೆಯ ಸಮಸ್ಯೆ: ಹೊಟ್ಟೆ ನೋವು, ಉಬ್ಬರ, ಅಜೀರ್ಣದಂಥ ಸಮಸ್ಯೆಗಳು ಅತಿಯಾದ ನಾರಿನ ಆಹಾರದಿಂದ ಬರಬಹುದು. ಕಾರಣ, ಇಂಥ ಆಹಾರಗಳು ಪಚನವಾಗಲು ಹೆಚ್ಚು ಸಮಯ ಬೇಕು. ಹಾಗಾಗಿ ಮೇಲಿಂದ ಮೇಲೆ ತುಂಬದೆ, ಸ್ವಲ್ಪವಾಗಿಯೇ ನಾರಿನ ಆಹಾರವನ್ನು ಹೊಟ್ಟೆಗೆ ನೀಡಬೇಕು ಮತ್ತು ಜೀರ್ಣವಾಗಲು ಸಮಯವನ್ನೂ ಕೊಡಬೇಕಾಗುತ್ತದೆ. ಹಾಗಿಲ್ಲದಿದ್ದರೆ ಪಚನಕ್ರಿಯೆಯಲ್ಲಿ ಎಡವಟ್ಟಾಗುವುದು ಖಚಿತ. ಪೋಷಕಾಂಶಗಳಿಗೂ ಹಿನ್ನಡೆ: ದೇಹಕ್ಕೆ ಬೇಕಾಗುವುದು ಕೇವಲ ನಾರು ಮಾತ್ರವೇ ಅಲ್ಲವಲ್ಲ- ಖನಿಜಗಳು, ಪ್ರೊಟೀನ್, ಜೀವಸತ್ವಗಳು, ಕೊಬ್ಬು ಎಲ್ಲವೂ ಸಂತುಲಿತ ಪ್ರಮಾಣದಲ್ಲಿ ಬೇಕಾಗುತ್ತದೆ. ಅತಿಯಾದ ನಾರಿನಿಂದ ಕ್ಯಾಲ್ಶಿಯಂ, ಕಬ್ಬಿಣ, ಸತುವಿನಂಥ ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ.
