ಉದಯವಾಹಿನಿ, ಬೀದರ್: 2026-27ನೇ ಸಾಲಿನ ಬಜೆಟ್‌ನಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಿಸಲು 1500 ಕೋಟಿ ರೂ. ಘೋಷಿಸಿದ್ದು, ಈ ವರ್ಷ 269 ಕೋಟಿ ರೂ. ಮೀಸಲಿಟ್ಟಿರುವುದನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಸ್ವಾಗತಿಸಿದ್ದಾರೆ.‌ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ದಾಖಲೆಯ 17ನೇ ಬಜೆಟ್ ಸರ್ವಸ್ಪರ್ಶಿಯಾಗಿದ್ದು, ಬಡವರ, ಮಧ್ಯಮವರ್ಗದವರ ಏಳಿಗೆಗೆ ಸಮರ್ಪಿತವಾಗಿದೆ. ವನ್ಯಜೀವಿ ಮಾನವ ಸಂಘರ್ಷ ನಿಗ್ರಹಕ್ಕೆ ಒತ್ತು ನೀಡಿದೆ.

ಇದರ ಜೊತೆಗೆ ಈಗಾಗಲೇ ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದು, ಬೆಂಗಳೂರು ಮಹಾನಗರದಲ್ಲಿ ಶ್ವಾನತಾಣ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪಿಸುತ್ತಿರುವುದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. 2026-27ರ ಸಾಲಿನಲ್ಲಿ ಅರಣ್ಯ ಇಲಾಖೆಯ ವಿವಿಧ ವೃಂದದಲ್ಲಿ ಖಾಲಿ ಇರುವ ಸುಮಾರು 2,000 ಹುದ್ದೆಗಳ ಭರ್ತಿ ಮಾಡಲಾಗುತ್ತಿದ್ದು, ಇದು ಕೂಡ ಇಲಾಖೆಯ ಸಮಗ್ರ ಕಾರ್ಯವೈಖರಿಯ ಸುಧಾರಣೆಗೆ ಚೈತನ್ಯ ತುಂಬಲಿದೆ. ವಿಶ್ವವಿಖ್ಯಾತ ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆಯ ಕ್ರಮವೂ ಸ್ವಾಗತಾರ್ಹವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!