ಉದಯವಾಹಿನಿ, ಹೈದರಾಬಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ, ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 126 ಮಾವೋವಾದಿಗಳು ಇಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಶರಣಾಗಲಿದ್ದಾರೆ ಎಂದು ವರದಿಯಾಗಿದೆ.
ಶನಿವಾರ (ಮಾ.7) ಸಂಜೆ 4 ಗಂಟೆ ಸುಮಾರಿಗೆ ತೆಲಂಗಾಣ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಈ ಶರಣಾಗತಿ ಸಮಾರಂಭ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೇವ್‌ಜಿ ನೇತೃತ್ವದ ಸಂಪೂರ್ಣ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ(ಪಿಎಲ್‌ಜಿಎ) ಸಮಿತಿಯ ಪ್ರಮುಖ ಸದಸ್ಯರು ಶರಣಾಗಲಿದೆ ಎಂದು ವರದಿಯಾಗಿದೆ. ಗಣಪತಿ ಎಂದೇ ಜನಪ್ರಿಯವಾಗಿರುವ ಹಿರಿಯ ಮಾವೋವಾದಿ ನಾಯಕ ಮುಪ್ಪಳ ಲಕ್ಷ್ಮಣ ರಾವ್ ಶರಣಾಗುವವರ ಪಟ್ಟಿಯಲ್ಲಿ ಇಲ್ಲ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆಗೆ ಬಂಜಾರ ಹಿಲ್ಸ್‌ನಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಸಿಎಂ ರೇವಂತ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಂದೂಕುಧಾರಿಗಳ ಶರಣಾತಿ: ಶಸ್ತ್ರಾಸ್ತ್ರ ತ್ಯಜಿಸುವ ನಿರೀಕ್ಷೆಯಿರುವ ಮಾವೋವಾದಿಗಳಲ್ಲಿ ಈ ಹಿಂದೆ ಶರಣಾದ ಮಾವೋವಾದಿ ನಾಯಕರ ವೈಯಕ್ತಿಕ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ ಹಲವರು ಬಂದೂಕುಧಾರಿಗಳು ಇದರಲ್ಲಿ ಸೇರಿದ್ದಾರೆ. ದೇವ್‌ಜಿ, ಬಡೇ ಚೊಕ್ಕಾ ರಾವ್, ನೂನ್ ನರಸಿಂಹ ರೆಡ್ಡಿ ಮತ್ತು ಮಲ್ಲ ರಾಜಿರೆಡ್ಡಿ ಅವರಂತಹ ನಾಯಕರೊಂದಿಗೆ ಸಂಬಂಧ ಹೊಂದಿದ್ದ ಬಂದೂಕುಧಾರಿಗಳು ಇವರಲ್ಲಿ ಸೇರಿದ್ದಾರೆ.

ಸಶಸ್ತ್ರಧಾರಿಗಳಲ್ಲದೇ , ಮಾವೋವಾದಿ ಸಂಘಟನೆಯೊಳಗೆ ಸಂವಹನ ವ್ಯವಸ್ಥೆಗಳನ್ನು ನಿರ್ವಹಿಸಿದ ಹಲವು ಕಂಪ್ಯೂಟರ್ ಆಪರೇಟರ್‌ಗಳು ಮತ್ತು ಸಿಗ್ನಲ್ ಆಪರೇಟರ್‌ಗಳು ಸಹ ಶರಣಾಗುವ ನಿರೀಕ್ಷೆಯಿದೆ. ಮಾವೋವಾದಿ ಪಕ್ಷದ ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಯ ಸಂಪೂರ್ಣ ಬೆಟಾಲಿಯನ್ ಶರಣಾಗಲು ಮುಂದೆ ಬಂದಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

 

Leave a Reply

Your email address will not be published. Required fields are marked *

error: Content is protected !!