ಉದಯವಾಹಿನಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ್ತಿ ನಂದಿನಿ ಶರ್ಮಾ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಹಾಗೂ ಐದು ವಿಕೆಟ್‌ಗಳ ಸಾಧನೆಯ ಮೂಲಕ ಹಲವು ದಾಖಲೆಯನ್ನು ಮುರಿದಿದ್ದಾರೆ. ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಹಾಗೂ 5 ವಿಕೆಟ್ ಸಾಧನೆ ಮಾಡಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ನೂತನ ಮೈಲುಗಲ್ಲನ್ನು ನಂದಿನಿ ಶರ್ಮಾ ತಲುಪಿದ್ದಾರೆ. ಅಂದ ಹಾಗೆ ನಂದಿನಿ ಶರ್ಮಾರ ದಾಖಲೆಯ ಬೌಲಿಂಗ್ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಕೇವಲ 4 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.
ಚಂಡೀಗಢ ಮೂಲದ ನಂದಿನಿ ಶರ್ಮಾ ಗುಜರಾತ್ ಜಯಂಟ್ಸ್ ತಂಡದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ವಿನಾಶವನ್ನುಂಟುಮಾಡಿದರು. ಕನಿಕಾ ಅಹುಜಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅವರು ತಮ್ಮ ಹ್ಯಾಟ್ರಿಕ್ ವಿಕೆಟ್ ಅನ್ನು ಪೂರ್ಣಗೊಳಿಸಿದರು. ಇದು WPL ಇತಿಹಾಸದಲ್ಲಿ ನಾಲ್ಕನೇ ಹ್ಯಾಟ್ರಿಕ್ ಮತ್ತು ಭಾರತೀಯ ಆಟಗಾರ್ತಿಯಿಂದ ಮೂಡಿ ಬಂದ ಎರಡನೇ ಹ್ಯಾಟ್ರಿಕ್ ಇದಾಗಿದೆ. ನಂದಿನಿ ಅವರ ಸಾಧನೆ ಎದ್ದು ಕಾಣುವುದು ಅವರು ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿರುವುದು. ನಂದಿನಿ WPL ಇತಿಹಾಸದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರತಿಭೆಗೆ ಅಂತಾರಾಷ್ಟ್ರೀಯ ಅನುಭವದ ಅಗತ್ಯವಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ. ನಾಯಕಿ ಜೆಮಿಮಾ ರೊಡ್ರಿಗಸ್ ಕೂಡ ನಂದಿನಿ ಅವರನ್ನು ಮೈದಾನದಲ್ಲಿ ಅಪ್ಪಿಕೊಳ್ಳುವ ಮೂಲಕ ಅವರ ಮಾಂತ್ರಿಕ ಬೌಲಿಂಗ್ ಅನ್ನು ಶ್ಲಾಘಿಸಿದರು.
