ಉದಯವಾಹಿನಿ, ನವದೆಹಲಿ: ಭಾರತಕ್ಕೆ ನೂತನವಾಗಿ ನೇಮಕಗೊಂಡಿರುವ ಅಮೆರಿಕ ರಾಯಭಾರಿ ಎರಡು ದೇಶಗಳ ನಡುವಿನ ಹೊಸ ವ್ಯಾಪಾರ ಮಾತುಕತೆಯನ್ನು ಪ್ರಾರಂಭ ಮಾಡಿದ್ದಾರೆ ಎಂಬ ಹೇಳಿಕೆ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಿರ್ಣಾಯಕ ಖನಿಜಗಳು, ಪರಮಾಣು ಶಕ್ತಿ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ಸಹಕಾರದ ಕುರಿತು ಚರ್ಚೆ ನಡೆಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೈ ಶಂಕರ್, ರುಬಿಯೊ ಜೊತೆಗೆ ಉತ್ತಮ ಮಾತುಕತೆಯಾಗಿದ್ದು, ವ್ಯಾಪಾರ, ನಿರ್ಣಾಯಕ ಖನಿಜಗಳು, ಪರಮಾಣು ಸಹಕಾರ, ರಕ್ಷಣೆ ಮತ್ತು ಇಂಧನ ಕುರಿತು ಚರ್ಚಿಸಲಾಗಿದೆ. ಹಾಗೇ ಈ ವಿಚಾರ ಹಾಗೂ ಇತರ ವಿಷಯಗಳ ಕುರಿತು ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಅಮೆರಿಕ ವಿದೇಶಾಂಗ ಇಲಾಖೆ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಕಾರ್ಯದರ್ಶಿ ರೂಬಿಯೊ ಮತ್ತು ಸಚಿವ ಜೈಶಂಕರ್ ಅವರು ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಗಳು ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವಲ್ಲಿ ಅವರ ಹಂಚಿಕೆಯ ಆಸಕ್ತಿಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
ಭಾರತವನ್ನು ಅಭಿನಂದಿಸಿದ ರೂಬಿಯೋ: ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಉಪವಕ್ತಾರ ಟಾಮಿ ಪಿಗೋಟ್, ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಕಾರ್ಯದರ್ಶಿ ರೂಬಿಯೊ ಮಾತನಾಡಿದ್ದು, ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತವನ್ನು ಪರಿವರ್ತಿಸಲು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ ಮಸೂದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಕಾರ್ಯದರ್ಶಿ ರೂಬಿಯೊ ಭಾರತವನ್ನು ಅಭಿನಂದಿಸಿದ್ದಾರೆ
ಅಮೆರಿಕ – ಭಾರತ ನಾಗರಿಕ ಪರಮಾಣು ಸಹಕಾರವನ್ನು ಹೆಚ್ಚಿಸಲು, ಅಮೆರಿಕದ ಕಂಪನಿಗಳಿಗೆ ಅವಕಾಶಗಳನ್ನು ವಿಸ್ತರಿಸಲು, ಹಂಚಿಕೆಯ ಇಂಧನ ಭದ್ರತಾ ಗುರಿಗಳನ್ನು ಮುನ್ನಡೆಸಲು ಮತ್ತು ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳನ್ನು ಭದ್ರಪಡಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ. ಹಾಗೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಬಲಗೊಳಿಸುವ ಕುರಿತು ಹಾಗೂ ಪ್ರಾದೇಶಿಕ ಬೆಳವಣಿಗೆ ಕುರಿತು ಪರಸ್ಪರ ದೃಷ್ಟಿ ಹಂಚಿಕೆ ಮಾಡಿಕೊಂಡಿದ್ದು, ಮುಕ್ತ ಇಂಡೋ -ಪೆಸಿಫಿಕ್‌ಗೆ ಅಮೆರಿಕ ಮತ್ತು ಭಾರತದ ಬದ್ಧತೆಯನ್ನು ಮತ್ತೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಮವಾರ ಭಾರತದ ಅಮೆರಿಕ ರಾಯಭಾರ ಕಚೇರಿಯಲ್ಲಿ ಭಾಷಣ ಮಾಡಿದ ಸೆರ್ಗಿಯೊ ಗೋರ್, ಭಾರತ ಮತ್ತು ಅಮೆರಿಕ ಪ್ರಸ್ತಾವಿತ ವ್ಯಾಪಾರ ಒಪ್ಪಂದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ತಿಳಿಸಿದ್ದರು
