ಉದಯವಾಹಿನಿ, ಚಿತ್ರಕೂಟ : ಶಾಲೆ ಕೇವಲ ಅಕ್ಷರ ಕಲಿಸುವ ಜಾಗವಲ್ಲ, ಬದಲಾಗಿ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಪವಿತ್ರ ಸ್ಥಳ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಗಳು ಮತ್ತು ಒಳ್ಳೆಯ ನಡತೆಯನ್ನು ಬೆಳೆಸುವ ಭವಿಷ್ಯದ ಬುನಾದಿ. ಆದರೆ ಇಂತಹ ಜ್ಞಾನದ ದೇಗುಲದಲ್ಲೇ ಶಿಕ್ಷಕಿಯೊಬ್ಬಳು ತನ್ನ ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡು ಪುಟ್ಟ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚಿತ್ರಕೂಟ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಮಧು ರೈ, ಪಾಠ ಮಾಡುವ ಬದಲು, ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಮಸಾಜ್ ಮಾಡಿಸಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಶಿಕ್ಷಕಿ ಮಧು ರೈ ತರಗತಿಯ ನೆಲದ ಮೇಲೆ ಮಲಗಿದ್ದು, ಸುತ್ತ ಇರುವ ಪುಟ್ಟ ಬಾಲಕಿಯರು ಶಿಕ್ಷಕಿಯ ಕಾಲುಗಳನ್ನು ಒತ್ತುತ್ತಿರುವ ದೃಶ್ಯ ಸೆರೆಯಾಗಿದೆ. ಜ್ಞಾನದ ದೀಪ ಬೆಳಗಬೇಕಾದ ಗುರುವೇ, ಮಕ್ಕಳನ್ನು ಇಂತಹ ಕೀಳು ಕೆಲಸಗಳಿಗೆ ಬಳಸಿಕೊಂಡಿರುವುದು ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

Leave a Reply

Your email address will not be published. Required fields are marked *

error: Content is protected !!