ಉದಯವಾಹಿನಿ , ಬೆಂಗಳೂರು: ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡನಿಂದ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳದೇ ಹೋದ್ರೆ ಬೀದಿಗಳಿದು ಹೋರಾಟ ಮಾಡೋದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟದಲ್ಲಿ ಪೌರಾಯುಕ್ತೆ ಮೇಲೆ ತುಚ್ಚವಾಗಿ ಕಾಂಗ್ರೆಸ್ ಮುಖಂಡ ಮಾತಾಡಿದ್ದಾರೆ. ರಾಜ್ಯ ಸರ್ಕಾರ ದ್ವೇಷ ಭಾಷಣ ಬಿಲ್ ತಂತು. ದ್ವೇಷ ಭಾಷಣ ಬಿಲ್ ಕಾಂಗ್ರೆಸ್ ನವರಿಗೆ ಅನ್ವಯ ಆಗೊಲ್ಲ. ವಿಪಕ್ಷಗಳು, ಮಾಧ್ಯಮಗಳಿಗೆ ಮಾತ್ರ ಅನ್ವಯ ಆಗುತ್ತದೆ. ಸರ್ಕಾರದ ವಿರುದ್ಧ ಮಾತಾಡೋರ ಧ್ವನಿ ಕಟ್ಟಿ ಹಾಕೋದಕ್ಕೆ ಮಾತ್ರ ಈ ಬಿಲ್ ತಂದಿದ್ದಾರೆ ಎಂದು ಕಿಡಿಕಾರಿದರು.
ಶಿಡ್ಲಘಟ್ಟ ಕೇಸ್‌ನಲ್ಲಿ ಕುಮಾರಸ್ವಾಮಿಯವರು ಈಗಾಗಲೇ ಮೊದಲ ದಿನವೇ ಮಹಿಳಾ ಅಧಿಕಾರಿಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಸರ್ಕಾರಕ್ಕೆ ಹೆಣ್ಣುಮಕ್ಕಳಿಗೆ ಕಿಂಚಿತ್ತು ಗೌರವ ಕೊಡಬೇಕು ಅಂತಾದ್ರೆ ಕೂಡಲೇ ದಯಾ ದಾಕ್ಷಿಣ್ಯ ಇಲ್ಲದೆ ಆತನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನಾವು ಮನಸು ಮಾಡಿದ್ರೆ ಶಿಡ್ಲಘಟ್ಟದಲ್ಲಿ ಒಂದು ಕರೆ ಕೊಟ್ಟರೆ ಬೀದಿಗಿಳಿದು ಹೋರಾಟ ಮಾಡಬಹುದು. ನಾವು ಶಾಂತಿಯುತವಾಗಿ, ತಾಳ್ಮೆಯಿಂದ ಹೋಗಬೇಕು ಅಂತ ಇದ್ದೀವಿ. ಸರ್ಕಾರಕ್ಕೆ ಎಚ್ಚರಿಕೆ ಕೊಡ್ತೀವಿ. ಕೂಡಲೇ ಸಿಎಂ, ಡಿಸಿಎಂ ಕಾಂಗ್ರೆಸ್ ಮುಖಂಡನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಸರ್ಕಾರ ಕ್ರಮ ತೆಗೆದುಕೊಳ್ಳದೇ ಹೋದ್ರೆ ಜೆಡಿಎಸ್ ನಿಂದ ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟರು.
