ಉದಯವಾಹಿನಿ, ಪರಂಗಿ ಅಥವಾ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಈ ಪೋಷಕಾಂಶಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅದರಲ್ಲೂ ಬೇಸಿಗೆಯ ಈ ಸಮಯದಲ್ಲಿ ಈ ಹಣ್ಣನ್ನು ತಿನ್ನುವುದರಿಂದ ದೇಹ ತುಂಬಾನೇ ಕೂಲ್ ಆಗಿರುತ್ತದೆ. ಅದಕ್ಕಾಗಿ ಈ ಹಣ್ಣನ್ನು ಹೆಚ್ಚಿನವರು ಸೇವನೆ ಮಾಡುತ್ತಾರೆ. ಆದ್ರೆ ಪಪ್ಪಾಯಿ ಹಣ್ಣನ್ನು ಯಾವ ಸಮಯದಲ್ಲಿ ತಿನ್ನೋದು ಬೆಸ್ಟ್, ಯಾವ ಸಮಯದಲ್ಲಿ ತಿಂದ್ರೆ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಇಂದಿನ ಈ ಲೇಖನದಲ್ಲಿ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಪಪ್ಪಾಯಿ ಹಣ್ಣನ್ನು ತಿನ್ನಲು ಸರಿಯಾದ ಮಾರ್ಗ ಮತ್ತು ಸಮಯವನ್ನು ತಿಳಿಯೋಣ.
ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ9, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಇ ಮತ್ತು ವಿಟಮಿನ್ ಕೆ ನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಈ ಪೂರ್ಣ ಪ್ರಯೋಜನಗಳನ್ನು ಪಡೆಯಲು ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಉಪಹಾರದ ಸಮಯದಲ್ಲಿ ಸೇವನೆ ಮಾಡೋದು ಬೆಸ್ಟ್. ಇದು ದಿನವಿಡೀ ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಚೈತನ್ಯಪೂರ್ಣವಾಗಿರಿಸುತ್ತದೆ. ಅಲ್ಲದೆ ಪಪ್ಪಾಯಿ ಕರುಳನ್ನು ನಿರ್ವಿಷಗೊಳಿಸುವುದರಿಂದ ನೀವು ರಾತ್ರಿಯಲ್ಲೂ ಇದನ್ನು ತಿನ್ನಬಹುದು. ಆದರೆ ಊಟದ ನಂತರ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಹಣ್ಣುಗಳನ್ನು ತಿನ್ನದಂತೆ ಎಚ್ಚರವಹಿಸಿ. ಏಕೆಂದರೆ ಊಟವಾದ ತಕ್ಷಣ ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಯಾಗಬಹುದು.
