ಉದಯವಾಹಿನಿ, ಚಿಕ್ಕಬಳ್ಳಾಪುರ : ಹೆಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ.ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆ ಯಿಲ್ಲ. ಶೀಘ್ರವೇ ಸಂಸದ ಸಚಿವ ಶಾಸಕರ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ಪ್ರೇರಣಾ ಭಾಷಣ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಖಂಡಿತ ಈ ಕೆಲಸ ಆಗಲಿದೆ. ಆದರೂ ಹೆಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಡಾ.ಎಂ.ಸಿ.ಸುಧಾಕರ್, ಮೇಲೂರು ರವಿಕುಮಾರ್, ಗೌರಿಬಿದನೂರು ಪುಟ್ಟಸ್ವಾಮಿಗೌಡ, ಸುಬ್ಬಾರೆಡ್ಡಿ ಅವರ ಸಹಕಾರ ಪಡೆದು ಈ ಕೆಲಸ ಮಾಡಲಾಗುವುದು. ಈ ನೀರಿನ ಅಪಾಯಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
3ನೇ ಹಂತದ ಶುದ್ಧೀಕರಣ ಎಂಬುದು ಪಾಲಿಸಿ ಮ್ಯಾಟರ್ ಆಗಿದ್ದು ನನ್ನೊಬ್ಬನಿಂದ ಆಗುವಂತಹುದಲ್ಲ. ನನಗೆ ಇನ್ನಷ್ಟು ಶಕ್ತಿ ಬಂದಾಗ ಖಂಡಿತ ಇದನ್ನು ಮಾಡಿಸಿಯೇ ಮಾಡಿಸುತ್ತೇನೆ. ಇದು ಏಕಾಏಕಿ ಇವತ್ತು ಹೇಳಿ ನಾಳೆ ಆಗುವಂತಹುದಲ್ಲ. 16-17 ವರ್ಷಗಳ ಹಿಂದೆ ಪ್ರಾಜೆಕ್ಟ್ ರೆಡಿಯಾದರೆ ಈಗ ಎತ್ತಿನಹೊಳೆ ಯೋಜನೆ ಸಾಕಾರವಾಗುತ್ತಿದೆ. ಹೀಗಾಗಿ ನಾನೂ ಕೂಡ 3ನೇ ಹಂತದ ಶುದ್ಧೀಕರಣದ ಪರವಾಗಿ ಇದ್ದೇನೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು. ನಾನು ಈಗಿನಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಶಾಸಕನಲ್ಲ, ಬದಲಿಗೆ ಮುಂದಿನ ಜನಾಂಗಕ್ಕಾಗಿ ಪೈಟ್ ಮಾಡುವ ಮನಸ್ಸುಳ್ಳ ಶಾಸಕ. ನನಗೆ ಈಗ ಸೀಮಿತ ಶಕ್ತಿಯಿದೆ. ಹೆಚ್ಚಿನ ಪವರ್ ಬಂದಾಗ 3ನೇ ಹಂತದ ಶುದ್ಧೀಕರಣ ಮಾಡಿಯೇ ಮಾಡಲಾಗುವುದು. ಈ ವಿಚಾರದಲ್ಲಿ ಸಂಸದರು, ಸಂದೀಪ್‌ರೆಡ್ಡಿ, ಆಂಜನೇಯರೆಡ್ಡಿ, ಹರೀಶ್‌ರೆಡ್ಡಿ ಅವರ ಜನಪರ ಕಾಳಜಿಯನ್ನು ಅಭಿನಂದಿಸುತ್ತೇನೆ. ಎಲ್ಲರೂ ಕೂಡಿ ಮುಖ್ಯಮಂತ್ರಿಗಳ ಮನವೊಲಿಸುವ ಕೆಲಸ ಮಾಡೋಣ ಎಂದರು.
