ಉದಯವಾಹಿನಿ, ಬೆಂಗಳೂರು: ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ಕೋರಿರುವ ಸಿಎಂ ಸಿದ್ದರಾಮಯ್ಯ ಅವರು, ಮಹಿಳೆಯರ ತ್ಯಾಗ, ಸೇವೆ, ಸಮರ್ಪಣೆಯನ್ನು ಸ್ಮರಿಸಿ, ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ (ಮಾರ್ಚ್‌ 8) ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಂದೇಶ ನೀಡಿದ್ದಾರೆ. ನನ್ನ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಮಹಿಳೆಯರ ಸಬಲೀಕರಣ, ಸಮಾನತೆ ಮತ್ತು ಘನತೆಯ ಬದುಕಿಗಾಗಿ ಜಾಗೃತರಾಗುವುದು, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯ.

ಇಂದಿನ ಆಧುನಿಕ‌ ಕಾಲಘಟ್ಟದಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಮಹಿಳೆಯರ ಪಾತ್ರ ಸಾಕಷ್ಟು ಬದಲಾಗಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರು ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ತಮ್ಮ ಸಾಮಾಜಿಕ ಹಾಗೂ ದೈಹಿಕ ಸವಾಲುಗಳನ್ನು ಮೀರಿ ಬೆಳೆದಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಇಂದಿಗೂ ಲಿಂಗ ಅಸಮಾನತೆ, ಕೌಟುಂಬಿಕ ದೌರ್ಜನ್ಯ, ಉದ್ಯೋಗ ಸ್ಥಳದಲ್ಲಿ ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಭಾರತದಲ್ಲಿ ಮನುಸ್ಮೃತಿಯ ಪ್ರಭಾವ ಮತ್ತು ಆಚರಣೆ ಗಾಢವಾಗಿದ್ದ ಕಾಲದಲ್ಲಿ ಸಮಾನ ಅವಕಾಶ ಎನ್ನುವುದು ಮಹಿಳೆಯರ ಪಾಲಿಗೆ ಕನ್ನಡಿಯೊಳಗಿನ ಗಂಟಿನಂತಿತ್ತು. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿ ಬರೀ ವರ್ಣಾಧಾರಿತ ವ್ಯವಸ್ಥೆಯ ವಿರುದ್ಧದ ಪ್ರತಿರೋಧಕ್ಕೆ ಸೀಮಿತವಾಗದೆ ಲಿಂಗ ಸಮಾನತೆಯನ್ನು ಕೂಡ ಒಳಗೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಹೀಗಾಗಿಯೇ ಅಕ್ಕಮಹಾದೇವಿ ಸೇರಿ ಅನೇಕರು ಶರಣ ಚಿಂತನೆಗಳಿಂದ ಪ್ರೇರಣೆಗೊಂಡು, ಲಿಂಗದೀಕ್ಷೆ ಪಡೆದು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆಹಾಕಿದರು.

Leave a Reply

Your email address will not be published. Required fields are marked *

error: Content is protected !!