ಉದಯವಾಹಿನಿ, ತುಮಕೂರು: ಮಾಜಿ ಸಚಿವ ಭೀಮಣ್ಣ ಖಂಡ್ರೆ ಲಿಂಗೈಕ್ಯರಾದ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಪತ್ರದ ಮೂಲಕ ಸಂತಾಪ ಸೂಚಿಸಿದ ಸಿದ್ದಲಿಂಗ ಶ್ರೀಗಳು, ಭೀಮಣ್ಣ ಖಂಡ್ರೆ ನಮ್ಮ ನಾಡಿನ ರಾಜಕೀಯ ಹಿರಿಯ ಮುತ್ಸದ್ಧಿ, ದಕ್ಷತೆ-ಬದ್ಧತೆ-ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದರು ಎಂದು ನೆನೆದಿದ್ದಾರೆ. ಸಮಾಜದ ಧುರೀಣ ಮುಖಂಡ, ಜನಾನುರಾಗಿ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರು ಇಂದು ಲಿಂಗೈಕ್ಯರಾಗಿದ್ದು ನಾಡಿಗೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರು ಸಿದ್ದಗಂಗಾ ಮಠದ ಪರಮ ಭಕ್ತರಾಗಿದ್ದು, ಯಾವತ್ತೂ ಪರಮಪೂಜ್ಯ ಗುರುದೇವರ ಕೃಪೆಗೆ ಪಾತ್ರರಾಗಿದ್ದವರು. ವೀರಶೈವ ಸಮಾಜದ ಅಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸಿದ್ದು, ಅವರ ಕಾಯಕ ಅವತಾರ ಅಳಿದು, ಆತ್ಮದ ಸುಳುಹು ಬಸವ ಬೆಳಕಿನಲ್ಲಿ ಸೇರಿ ಹೋಗಿದೆ. ಅದಕ್ಕಾಗಿ ನಾವು ಸಂತೋಷ ಪಡಬೇಕೇ ಹೊರತು ಸಂತಾಪ ಪಡಬೇಕಿಲ್ಲ ಅನ್ನೋದು ಸಿದ್ದಗಂಗಾ ಶ್ರೀಗಳ ಅಭಿಪ್ರಾಯವಾಗಿದೆ. ಆದರೂ ಲೌಕಿಕವಾಗಿ ಅವರ ಬಂಧು ಬಾಂಧವರಿಗೆ ಅವರ ಆಗಲಿಕೆಯಿಂದ ದುಃಖವುಂಟಾಗಿದ್ದು, ಅದನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಿದ್ದಗಂಗಾ ಶ್ರೀಗಳು ಪ್ರಾರ್ಥಿಸಿದ್ದಾರೆ.
