ಉದಯವಾಹಿನಿ, ವರ್ಷವಿಡೀ ಹಲವು ರೀತಿಯ ಗಡ್ಡೆಗಳನ್ನು ನಾವು ಆಹಾರದಲ್ಲಿ ಬಳಸುತ್ತೇವೆ. ಚಳಿಗಾಲದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಈರುಳ್ಳಿಯಿಂದ ತೊಡಗಿ, ಗಜ್ಜರಿ, ಗೆಣಸು, ಬೀಟ್‌ರೂಟ್, ನವಿಲುಕೋಸು, ಮೂಲಂಗಿ ಮುಂತಾದ ಎಷ್ಟೋ ನಮ್ಮ ನಿತ್ಯದ ಆಹಾರಗಳ ಪಟ್ಟಿಯಲ್ಲಿವೆ. ಆದರೆ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದಿದ್ದರೂ, ಪೌಷ್ಟಿಕ ಸತ್ವಗಳ ಖನಿ ಎಂದೇ ಹೆಸರಾಗಿದ್ದು ಟರ್ನಿಪ್ ಗಡ್ಡೆ. ಹಲವು ದೇಶಗಳಲ್ಲಿ ಟರ್ನಿಪ್ ಗಡ್ಡೆ ಅತ್ಯಂತ ಜನಪ್ರಿಯ ತರಕಾರಿ. ಆದರೆ ಭಾರತದಲ್ಲಿ ಉಳಿದೆಲ್ಲಾ ಗಡ್ಡೆಗಳಷ್ಟು ಟರ್ನಿಪ್ ಬಳಕೆಯಲ್ಲಿಲ್ಲ.
ಯಾವುದೋ ದೇಶದ ಒಂದೂರಿನಲ್ಲಿ, ಕೀಳಲಾರದಷ್ಟು ಬಲು ದೊಡ್ಡ ಟರ್ನಿಪ್ ಗಡ್ಡೆಯೊಂದು ರೈತನೊಬ್ಬನ ತೋಟದಲ್ಲಿ ಬೆಳೆಯುತ್ತದೆ. ಅದನ್ನು ರೈತನೊಬ್ಬನೇ ಕೀಳಲಾರದೆ, ಆತನ ಸಹಾಯಕ್ಕೆ ಊರಿನ ಜನರೆಲ್ಲಾ ಒಬ್ಬೊಬ್ಬರಾಗಿ ಬರುತ್ತಾರೆ. ಅಂತೂ ಜನರೆಲ್ಲಾ ಒಬ್ಬರನ್ನೊಬ್ಬರು ಹಿಡಿದು ಎಳೆದು ಆ ಗಡ್ಡೆಯನ್ನು ಕಿತ್ತು, ಹಂಚಿಕೊಂಡು ತಿಂದು ನಲಿದ ಕಥೆಯನ್ನು ಮಕ್ಕಳಿದ್ದಾಗ ಬಹಳಷ್ಟು ಜನ ಕೇಳಿರಬಹುದು. ವಿದೇಶಿ ಅಡುಗೆಗಳಿಗೆ ಮಾತ್ರವಲ್ಲ, ಎಲ್ಲ ಭಾರತೀಯ ಅಡುಗೆ ಗಳಿಗೂ ಹೊಂದಿಕೊಳ್ಳಬಹುದಾದಂಥ ತರಕಾರಿಯಿದು. ಸಾಂಬಾರು, ಪಲ್ಯ, ಗೊಜ್ಜು, ಕೋಸಂಬರಿ, ಸಲಾಡ್, ಸೂಪ್- ಹೀಗೆ ಯಾವುದೇ ಅಡುಗೆಗಳಲ್ಲೂ ಇದನ್ನು ಬಳಸಬಹುದು. ಹಸಿಯಾಗಿ ತಿನ್ನುವುದಕ್ಕೂ ಇದು ರುಚಿಯೆ. ಒಳಗಿನ ಭಾಗವೆಲ್ಲಾ ಬೀಟ್‌ರೂಟ್‌ನ ಹೋಲಿಕೆಯಲ್ಲೇ ಇರುತ್ತದೆ. ರುಚಿಯೂ ತೀರಾ ಭಿನ್ನವಲ್ಲದೆ, ಸಣ್ಣ ಘಾಟೊಂದು ಮಿಳಿತವಾದಂತೆ ಭಾಸವಾಗುತ್ತದೆ. ಏನಿದರ ಸತ್ವಗಳು ಎಂಬುದನ್ನು ನೋಡೋಣ.
ಹೌದು! ದೇಹಕ್ಕೆ ಹೆಚ್ಚಿನ ಕ್ಯಾಲರಿಗಳನ್ನು ಹೆಚ್ಚಿನ ಸತ್ವಗಳನ್ನು ನೀಡುವಂಥ ಗಡ್ಡೆಯಿದು. ಇದು ನಾರುಭರಿತ ಗಡ್ಡೆಯಾದ್ದರಿಂದ ಹಸಿವಾಗುವುದನ್ನು ಹೆಚ್ಚು ಕಾಲದವರೆಗೆ ಮುಂದೂಡುತ್ತದೆ. ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಅನುಭವವನ್ನೇ ನೀಡುತ್ತದೆ. ಇದರಿಂದ ತೂಕ ಇಳಿಸುವವರಿಗೆ ಅನುಕೂಲ. ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು ಇದರಲ್ಲಿ ಹೇರಳವಾಗಿವೆ. ಇದರ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಬ್ಬಿಣದಂಶ ಹೀರಿಕೊಳ್ಳುವ ಸಾಧ್ಯತೆ ಹೆಚ್ಚಿಸುತ್ತದೆ. ಕೆ ಜೀವ ಸತ್ವದಿಂದ ಮೂಳೆಗಳು ಬಲಗೊಂಡು, ರಕ್ತ ಸೋರಿದಾಗ ಹೆಪ್ಪುಗಟ್ಟುವ ಸಾಮರ್ಥ್ಯ ಹೆಚ್ಚುತ್ತದೆ. ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸುವ ನಾರು ಇದರಲ್ಲಿ ಅಧಿಕವಾಗಿದೆ. ಮಲಬದ್ಧತೆಯನ್ನು ನಿವಾರಿಸಿ, ಕರುಳನ್ನು ಶುಚಿಯಾಗಿಡುತ್ತದೆ. ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವಂಥ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ನಾರು ಸೇವನೆಯಿಂದ ಹೆಚ್ಚುತ್ತದೆ
