ಉದಯವಾಹಿನಿ, ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಕೆಲ ಮಹಿಳೆಯರು ಸೀರೆ ಕಟ್ಟಿಕೊಂಡು ಬಯಲಿನಲ್ಲಿ ಶೌಚಕ್ಕೆ ಹೋಗುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ ವೈಯಕ್ತಿಕ ಶೌಚಾಲಯ ಕಾಮಗಾರಿಗೆ ಆದೇಶ ನೀಡಿದರು.
ಅಂಬೇಡ್ಕರ್ ಕಾಲನಿಯಲ್ಲಿ ಶೌಚಗೃಹಕ್ಕೆ ಸಮಸ್ಯೆ ಆಗಿರುವ ಬಗ್ಗೆ ಮಹಿಳೆಯರು ಕಾರ್ಯದರ್ಶಿಗಳ ಬಳಿ ಅಹವಾಲು ಹೇಳಿಕೊಂಡರು. ನಂತರ ಸಾಮೂಹಿಕ ಶೌಚಾಲಯದ ತಡೆಗೋಡೆ ಕಾಮಗಾರಿ ವೀಕ್ಷಿಸಿ, ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ವೈಯಕ್ತಿಕ ಶೌಚಾಲಯ ನಿರ್ಮಾಣ ಕಾಮಗಾರಿಯ ಆದೇಶ ಪ್ರತಿಯನ್ನು ಮಹಿಳೆಯರಿಗೆ ವಿತರಿಸಿದರು.

ಇದೇ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ, ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗಬಾರದು. ಬಹಿರ್ದೆಸೆಗೆ ಹೋಗುವುದರಿಂದ ಹಲವಾರು ರೋಗ ರುಜಿನಗಳು ಬರುತ್ತವೆ. ಎಲ್ಲರೂ ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು. ದಲಿತ ಕುಟುಂಬಗಳು ಸ್ವಚ್ಛ ಭಾರತ ಯೋಜನೆಯಡಿ 20 ಸಾವಿರ ರೂ. ಸಹಾಯಧನದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣ ಆಗುವವರೆಗೂ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ಸಾಮೂಹಿಕ ಶೌಚಾಲಯದ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆದೇಶ ಪ್ರತಿ ವಿತರಣೆ:ಗ್ರಾಮದ ಮಹಿಳೆಯರ ಮನವೊಲಿಸಿ ಸ್ಥಳದಲ್ಲಿಯೇ 21 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕಾಮಗಾರಿ ಮಂಜೂರಾತಿ ಆದೇಶ ಪ್ರತಿ ವಿತರಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದೇಶ ಪ್ರತಿ ವಿತರಣೆ ಮಾಡಿದರು

Leave a Reply

Your email address will not be published. Required fields are marked *

error: Content is protected !!