ಉದಯವಾಹಿನಿ, ಹುಬ್ಬಳ್ಳಿ: ಕಳೆದೊಂದು ತಿಂಗಳಿನಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿರುವ ಚಿರತೆಯ ಸೆರೆಹಿಡಿಯಲು ಕಳೆದ ಭಾನುವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಡ್ರೋನ್ ಕ್ಯಾಮರಾದಲ್ಲಿ ಚಿರತೆ ಇರುವಿಕೆ ಪತ್ತೆಯಾಗಿದೆ.
ಡಿ.17ರಂದು ಮೊದಲ ಬಾರಿಗೆ ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದೆ. ಚಿರತೆ ಸೆರೆಗೆ ಮೂರು ಕಡೆಗಳಲ್ಲಿ ಬೋನ್ ಇರಿಸಲಾಗಿದೆ. 11 ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಿದರೂ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ. ಹೀಗಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ನಿಂದ ಎರಡು ಥರ್ಮಲ್ ಡ್ರೋನ್ ಕ್ಯಾಮರಾ ಹಾಗೂ ತಂಡವನ್ನು ಅರಣ್ಯ ಇಲಾಖೆ ಕರೆಸಿದೆ.
ಮೈಸೂರಿನಿಂದ ಚಿರತೆ ಸೆರೆ ಹಿಡಿಯುವ ಕಾರ್ಯಪಡೆಯನ್ನು ಕರೆಸಲಾಗಿದೆ. ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದಲ್ಲಿನ ಇಬ್ಬರು ಅರವಳಿಕೆ ತಜ್ಞರು, ಧಾರವಾಡ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆಯ ತಜ್ಞರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಕಾಣಿಸಿಕೊಂಡ ಚಿರತೆ: ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆ 4 ರಿಂದ ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಒಂದು ಬಾರಿ ಕಾಣಿಸಿಕೊಂಡಿದೆ. ಆದರೆ, ಮತ್ತೆ ಮರೆಯಾಗಿದೆ. ಹೀಗಾಗಿ ಬೆಳಗಿನ ತನಕ ಕಾರ್ಯಾಚರಣೆ ನಡೆಸಿದರೂ ಸಿಗಲಿಲ್ಲ. ಸೋಮವಾರ ರಾತ್ರಿ ಸಿಸಿಎಫ್ ವಸಂತ ರೆಡ್ಡಿ, ಡಿಸಿಎಫ್ ಅಲಿಂ, ಎಸಿಎಫ್ ಪರಿಮಳಾ ವಿ.ಹೆಚ್ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಂದು ಕೂಡ ಇದೇ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆಹಾರ ಸಲೀಸಾಗಿ ಸಿಗುತ್ತಿರುವುದರಿಂದ ವಿಮಾನ ನಿಲ್ದಾಣದ ಬಳಿ ಬೀಡುಬಿಟ್ಟಿರುವ ಚಿರತೆ: ವಿಮಾನ ನಿಲ್ದಾಣದ ಬಳಿ ಪ್ರಾಧಿಕಾರ ಬಳಸದ ಸುಮಾರು 150 ಎಕರೆಗೂ ಹೆಚ್ಚು ಪ್ರದೇಶವಿದೆ. ಅಲ್ಲಿ ಕಾಡಿನಂತೆ ಪೊದೆ, ವಿವಿಧ ಮರಗಳು ಬೆಳೆದಿವೆ. ಜತೆಗೆ ನವಿಲು, ಮುಳ್ಳುಹಂದಿ, ಮೊಲಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಹೀಗಾಗಿ ಚಿರತೆಗೆ ಆಹಾರವು ಸಲೀಸಾಗಿ ಸಿಗುತ್ತಿದ್ದು, ಅಲ್ಲೇ ಬೀಡು ಬಿಟ್ಟಿದೆ. ಆಗಾಗ್ಗೆ ಗಾಮನಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೂ ಹೋಗಿ ವಾಪಸ್ ಬರುತ್ತದೆ. ಕೆಲ ಸಲ ಬೀದಿನಾಯಿಯನ್ನು ಬೇಟೆಯಾಡುತ್ತಿರುವುದರಿಂದ ಈ ಪ್ರದೇಶ ಬಿಟ್ಟು ಬೇರೆಲ್ಲೂ ಹೋಗುತ್ತಿಲ್ಲ.
