ಉದಯವಾಹಿನಿ, ಕಲಬುರಗಿ: ನಗರದ ಲಾಡ್ಜ್ ಒಂದರ ಹಿಂಭಾಗದ ಪಾಳುಬಿದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಹತ್ಯೆಯಾದ ಯುವಕನನ್ನು ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ (21) ಎಂದು ಗುರುತಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ತಡರಾತ್ರಿ ಈ ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ಪಡೆದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫಾರೆನ್ಸಿಕ್ ತಂಡ ಹಾಗೂ ಶ್ವಾನ ದಳದಿಂದಲೂ ತನಿಖೆ ಕೈಗೊಳ್ಳಲಾಗಿದೆ. ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. ಹಳೆಯ ದ್ವೇಷದ ಹಿನ್ನೆಲೆ ಈ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹಬೂಬ್‌ನ ತಂದೆ, ನನ್ನ ಮಗ ಮನೆಗೆ ಬರುತ್ತಿರಲಿಲ್ಲ. ಯಾವಾಗಲೂ ಹೊರಗಡೆಯೇ ಇರುತ್ತಿದ್ದ. ಬಸ್ ನಿಲ್ದಾಣ, ಹೀಗೆ ಹೊರಗಡೆಯೇ ಆತ ಮಲಗುತ್ತಿದ್ದ. ಈಗ ಮಗನ ಕೊಲೆ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!