ಉದಯವಾಹಿನಿ, ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿರುವ ಈ ಸರ್ಕಾವರೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಜನರ ವಿಶ್ವಾಸ ಸಹ ಕಳೆದುಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆ ಭ್ರಷ್ಟಾಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮಂತ್ಲಿ ಮನಿ ಬಹಿರಂಗ ಆದಾಗಲೇ ಅಬಕಾರಿ ಸಚಿವರನ್ನ ವಜಾ ಮಾಡಬೇಕಿತ್ತು. ಆದ್ರೆ ಈ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಚರಮಸೀಮೆಗೆ ಸರ್ಕಾರ ತಲುಪಿದೆ. ಸಿಎಂ ಕೂಡಾ ಇನ್ನೆಷ್ಟು ದಿನ ಇರ್ತೀನೋ? ಇರುವಷ್ಟು ದಿನ ಚೀಲ ತುಂಬಿಸಿಕೊಳ್ಳೋಣ ಅಂತ ಇದ್ದಾರೆ ಎಂದು ಲೇವಡಿ ಮಾಡಿದರು.
ಸದನದಲ್ಲಿ ನರೇಗಾ ಹೆಸರು ಬದಲಾವಣೆ ಚರ್ಚೆ ಕುರಿತು ಮಾತನಾಡಿ, ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ವಿರೋಧ ಮಾಡುವ ಅಂಶಗಳೇ ಇಲ್ಲ. ಆದ್ರೂ ಕಾಂಗ್ರೆಸ್‌ನವ್ರು ಏನೋ ಆಗಿದೆ ಅಂತ ಬಾಯಿ ಬಡಿದುಕೊಳ್ತಿದ್ದಾರೆ. ಸದನದಲ್ಲಿ ನಾವೂ ಚರ್ಚೆ ಮಾಡ್ತೇವೆ. ಚರ್ಚೆಗೆ ಹೆದರೋದಿಲ್ಲ. ಗಾಂಧಿ ಹೆಸರು ತೆಗೆದು ರಾಮನ ಹೆಸರು ಇಡಲಾಗಿದೆ. ಗಾಂಧೀಜಿಗೆ ಶ್ರೀರಾಮನೇ ಪ್ರೇರಣೆ ಅಲ್ವೇ ಅಂತ ಪ್ರಶ್ನೆ ಮಾಡಿದ್ರು. ಸರ್ಕಾರ ಬರೆದುಕೊಟ್ಟ ಭಾಷಣವನ್ನ ರಾಜ್ಯಪಾಲರು ಓದುತ್ತಾರೆ. ಆದ್ರೆ ಈ ಸರ್ಕಾರಕ್ಕೆ ನೈತಿಕತೆ ಇಲ್ಲ, ಜನರ ವಿಶ್ವಾಸ ಕಳೆದುಕೊಂಡಿದೆ. ಎಡಪಂಥೀಯರ ಚಾಳಿ ಸಿಎಂಗೆ ಬಂದಿದೆ. ಸರ್ಕಾರ ರಾಜ್ಯಪಾಲರಿಂದ ಏನೇ ಹೇಳಿಸಬಹುದು. ಆದ್ರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ಇದೆ. ಆ ಜನಾಭಿಪ್ರಾಯವನ್ನ ಈ ಸರ್ಕಾರ ಬದಲಾಯಿಸಲು ಆಗಲ್ಲ. ಸರ್ಕಾರ ಜನರ ವಿಶ್ವಾಸ ಗೆಲ್ಲುವಂಥ ಯಾವ ಕೆಲಸವನ್ನೂ ಕಳೆದ ಎರಡೂವರೆ ವರ್ಷದಲ್ಲಿ ಮಾಡಿಲ್ಲ ಎಂದು ತಿವಿದರು.
