ಉದಯವಾಹಿನಿ, ನವದೆಹಲಿ: 2000 ರಲ್ಲಿ ದೆಹಲಿಯ ಕೆಂಪುಕೋಟೆಯ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಲಶ್ಕರ್-ಇ-ತೊಯ್ಬಾ ಭಯೋತ್ಪಾದಕ ಮೊಹಮ್ಮದ್ ಆರೀಫ್ ಅಲಿಯಾಸ್ ಅಶ್ಫಾಖ್ ಸಲ್ಲಿಸಿರುವ ಕ್ಯೂರೇಟಿವ್ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮಿತಿ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ವಿಶೇಷ ಪೀಠ ಈ ಪಿಟಿಷನ್ ಅನ್ನು ಪರಿಗಣಿಸಿ, ವಾದವನ್ನು ಆಲಿಸಿತು. 2022ರ ನವೆಂಬರ್ 3ರಂದು ಸುಪ್ರೀಂ ಕೋರ್ಟ್ ಅರೀಫ್‌ರ ಮರಣದಂಡನೆಯ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಎರಡನೇ ಬಾರಿಗೆ ಶಿಕ್ಷೆಯನ್ನು ದೃಢೀಕರಿಸಿತ್ತು. ಈ ತೀರ್ಪಿನ ವಿರುದ್ಧ ಇದೀಗ ಕ್ಯೂರೇಟಿವ್ ಪಿಟಿಷನ್ ಸಲ್ಲಿಸಲಾಗಿದ್ದು, ಇದು ಅಂತಿಮ ಕಾನೂನು ಪರಿಹಾರದ ಮಾರ್ಗವಾಗಿದೆ.
2000ರ ಡಿಸೆಂಬರ್ 22ರಂದು ಕೆಂಪುಕೋಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿ ಹತರಾಗಿದ್ದರು. ಪಾಕಿಸ್ತಾನಿ ಮೂಲದ ಅರೀಫ್ ಸೇರಿದಂತೆ LeTಯ ನಾಲ್ವರು ಭಯೋತ್ಪಾದಕರು 1999ರಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಶ್ರೀನಗರದಲ್ಲಿ ಷಡ್ಯಂತ್ರ ರೂಪಿಸಿ ಕೆಂಪುಕೋಟೆಯಲ್ಲಿ ದಾಳಿ ನಡೆಸಿದ್ದರು.
