ಉದಯವಾಹಿನಿ, ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲಾ ಸಂಕೀರ್ಣದಲ್ಲಿ ಬಸಂತ್ ಪಂಚಮಿಯ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಸ್ಲಿಂ ಸಮುದಾಯದ ಸದಸ್ಯರು ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ.
11ನೇ ಶತಮಾನದ ಈ ಸ್ಮಾರಕವನ್ನು ಹಿಂದೂಗಳು ದೇವಿ ಸರಸ್ವತಿಯ ದೇವಸ್ಥಾನವೆಂದು ಪರಿಗಣಿಸುತ್ತಾರೆ. ಆದರೆ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದ್ ಎಂದು ಭಾವಿಸುತ್ತಾರೆ.
ಈ ವಿವಾದಿತ ಸ್ಥಳದಲ್ಲಿ ಸಾಮಾನ್ಯವಾಗಿ ಹಿಂದೂಗಳು ಪ್ರತಿ ಮಂಗಳವಾರ ಮತ್ತು ಬಸಂತ ಪಂಚಮಿಯಂದು ಪೂಜೆ ಸಲ್ಲಿಸಬಹುದು. ಮುಸ್ಲಿಮರು ಶುಕ್ರವಾರಗಳಂದು ಮಧ್ಯಾಹ್ನ 1 ರಿಂದ 3 ಗಂಟೆಯ ವರೆಗೆ ನಮಾಜ್ ಸಲ್ಲಿಸಬಹುದು.
ಆದರೆ, ಈ ವರ್ಷ ಬಸಂತ ಪಂಚಮಿ ಶುಕ್ರವಾರಕ್ಕೆ ಬಂದಿರುವ ಹಿನ್ನೆಲೆ ಸ್ಪಷ್ಟತೆಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಿಲ್ಲಾಡಳಿತವು ಎರಡೂ ಸಮುದಾಯಗಳ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯಲು ಸೂಕ್ತ ಕಾನೂನು ಸುವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದೆ. ಮುಸ್ಲಿಂ ಸಮುದಾಯದಿಂದ ಎಷ್ಟು ಜನ ನಮಾಜ್‌ಗೆ ಬರುವರೆಂಬ ಮಾಹಿತಿಯನ್ನು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.
