ಉದಯವಾಹಿನಿ, ದಾವೋಸ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕನಸಿನ ಶಾಂತಿ ಮಂಡಳಿ ಅಧಿಕೃತವಾಗಿ ಅಸ್ವಿತ್ವಕ್ಕೆ ಬಂದಿದೆ. ಸ್ವಿಜರ್ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ದೇಶಗಳ ನಾಯಕರು ಸಹಿ ಹಾಕುವ ಮೂಲಕ ಈ ಸಂಘಟನೆಯ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಇದು ಅಂತರರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವ ಸಂಸ್ಥೆಯಾಗಿದ್ದು 1 ಬಿಲಿಯನ್ ಡಾಲರ್‌ ಹಣವನ್ನು ನೀಡಿದರೆ ಶಾಶ್ವತ ಸದಸ್ಯತ್ವ ಪಡೆಯಬಹುದು. ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧದ ನಂತರ ಗಾಜಾದ ಪುನರ್ನಿರ್ಮಾಣ ಮತ್ತು ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಈ ಮಂಡಳಿಯನ್ನು ಮೂಲತಃ ಕಲ್ಪಿಸಲಾಗಿತ್ತು. ಈಗ ಇದನ್ನು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವವರೆಗೆ ವಿಸ್ತರಿಸಲಾಗಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಪರಾಗ್ವೆಯ ಸಂಪ್ರದಾಯವಾದಿ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ, ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್, ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ಮತ್ತು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಈ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದ್ದಾರೆ.

ಪಾಕಿಸ್ತಾನ ಸೇರ್ಪಡೆಗೆ ಇಸ್ರೇಲ್‌ ವಿರೋಧ ವ್ಯಕ್ತಪಡಿಸಿದ್ದರೂ ಶಾಂತಿ ಮಂಡಳಿ ಸೇರ್ಪಡೆಗೆ ಟ್ರಂಪ್‌ ಒಪ್ಪಿಗೆ ನೀಡಿದ್ದಾರೆ. ಅಮೆರಿಕ ಭಾರತ, ಚೀನಾ, ರಷ್ಯಾ ಸೇರಿದಂತೆ ಒಟ್ಟು 50ಕ್ಕಿಂತ ಹೆಚ್ಚು ದೇಶಗಳಿಗೆ ಈ ಮಂಡಳಿ ಸೇರುವಂತ ಆಹ್ವಾನಿಸಿದೆ. ಈ ಪೈಕಿ 35 ದೇಶಗಳು ಮಂಡಳಿ ಸೇರಲು ಒಪ್ಪಿಕೊಂಡಿವೆ. ಇವುಗಳಲ್ಲಿ ಇಸ್ರೇಲ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹರೇನ್‌, ಜೋರ್ಡಾನ್, ಕತಾರ್ ಮತ್ತು ಈಜಿಪ್ಟ್‌ನಂತಹ ಮಧ್ಯಪ್ರಾಚ್ಯ ಮಿತ್ರರಾಷ್ಟ್ರಗಳು ಸೇರಿವೆ. ಟ್ರಂಪ್‌ ಜೊತೆಗೆ ಉತ್ತಮ ವೈಯಕ್ತಿಕ ಸಂಬಂಧಗಳನ್ನು ಬೆಳೆಸಿಕೊಂಡಿರುವ ನ್ಯಾಟೋ ಸದಸ್ಯರಾದ ಟರ್ಕಿ ಮತ್ತು ಹಂಗೇರಿ ಕೂಡ ಭಾಗವಹಿಸಲು ಒಪ್ಪಿಕೊಂಡಿವೆ. ಹಾಗೆಯೇ ಮೊರಾಕೊ, ಪಾಕಿಸ್ತಾನ, ಇಂಡೋನೇಷ್ಯಾ, ಕೊಸೊವೊ, ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ಪರಾಗ್ವೆ ಮತ್ತು ವಿಯೆಟ್ನಾಂ ಒಪ್ಪಿಕೊಂಡಿವೆ.

 

Leave a Reply

Your email address will not be published. Required fields are marked *

error: Content is protected !!