ಉದಯವಾಹಿನಿ, ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರದ 26 ವರ್ಷದ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ, ಜನವರಿ 26, 2026 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವದ ಭವ್ಯ ಮೆರವಣಿಗೆಯಲ್ಲಿ ಸಂಪೂರ್ಣ ಪುರುಷರಿಂದ ಕೂಡಿದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ತುಕಡಿ ಮುನ್ನಡೆಸುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
77ನೇ ಗಣರಾಜ್ಯೋತ್ಸವಕ್ಕೆ ಎಲ್ಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದ್ದು, ಜನವರಿ 26ರಂದು ನಡೆಯಲಿರುವ ಭವ್ಯ ಮೆರವಣಿಗೆಯು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕ್ಷಣವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ.
ದೇಶದ ಅತಿದೊಡ್ಡ ಅರೆಸೈನಿಕ ಪಡೆ ಮತ್ತು ಭಾರತದಾದ್ಯಂತ ಸಮವಸ್ತ್ರದಲ್ಲಿರುವ ಮಹಿಳೆಯರಿಗೆ ಅಪರೂಪದ ಮತ್ತು ಪ್ರಬಲ ಮೈಲಿಗಲ್ಲು ಆಗಿರುವ ವಿಧ್ಯುಕ್ತ ಮೆರವಣಿಗೆಯಲ್ಲಿ ಸಿಮ್ರಾನ್ ಬಾಲಾ 140ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯನ್ನು ಮುನ್ನಡೆಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನೌಶೇರಾ ಗಡಿ ಪಟ್ಟಣದಿಂದ ಬಂದ ಸಿಮ್ರಾನ್, 2023ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ವರ್ಷ ಅರ್ಹತೆ ಪಡೆದ ಜಮ್ಮು ಮತ್ತು ಕಾಶ್ಮೀರದ ಏಕೈಕ ಮಹಿಳೆ ಇವರಾಗಿದ್ದಾರೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಯುವ ಆಕಾಂಕ್ಷಿಗಳಿಗೆ ಮಾದರಿ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಯುಪಿಎಸ್‌ಸಿ ಸಿಎಪಿಎಫ್‌ಗೆ ಅರ್ಹತೆ ಪಡೆದ 151 ಅಭ್ಯರ್ಥಿಗಳಲ್ಲಿ ಸಿಮ್ರಾನ್ 82ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದ್ದರು.  ನೌಶೇರಾದಲ್ಲಿ ಆರಂಭಿಕ ಹಾಗೂ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದ ಸಿಮ್ರಾನ್ ಬಾಲಾ, ಜಮ್ಮುವಿನ ಗಾಂಧಿ ನಗರದ ಸರ್ಕಾರಿ ಪದವಿ ಕಾಲೇಜಿನಿಂದ (ಜಿಡಿಸಿ) ಪದವಿ ಪಡೆದಿದ್ದಾರೆ. ಸಿಮ್ರಾನ್ ತಂದೆ ಮಾಜಿ ಸೈನಿಕರಾಗಿದ್ದು, ಈಗ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶವು ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗುತ್ತಿರುವಾಗ, ಸಿಮ್ರಾನ್ ಬಾಲಾ ಅವರ ಕರ್ತವ್ಯ ಪಥದ ಮೆರವಣಿಗೆ ಕೇವಲ ವಿಧ್ಯುಕ್ತ ಪರಿಪೂರ್ಣತೆಯ ಬಗ್ಗೆ ಮಾತ್ರವಲ್ಲ, ಮುಂದಿನ ಪೀಳಿಗೆಯ ಸಮವಸ್ತ್ರದಲ್ಲಿರುವ ಮಹಿಳೆಯರಿಗೆ ಮಾದರಿ ಆಗಲಿದೆ.

Leave a Reply

Your email address will not be published. Required fields are marked *

error: Content is protected !!