ಉದಯವಾಹಿನಿ, ಸಿಂಗಾಪುರ್: ಕರ್ನಾಟಕದ ಮೂಲದ ಸಿಂಗಾಪುರದ ಪರಿಸರ ಪ್ರೇಮಿ ಕೀರ್ತಿದಾ ಮೆಕಾನಿ ಅವರು ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 66 ವರ್ಷದ ಮೆಕಾನಿ, ಸಿಂಗಾಪುರದ ಪರಿಸರ ಸುಸ್ಥಿರತೆ, ಸಮುದಾಯ ಸೇವೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಪರಿಸರ ಕಾರ್ಯಕ್ಕಾಗಿ ಸಿಂಗಾಪುರದ ಅಧ್ಯಕ್ಷೀಯ ಪ್ರಶಸ್ತಿ ಪಡೆದಿರುವ ಇವರು, 2024ರಲ್ಲಿ ಸಿಂಗಾಪುರದ ಮಹಿಳಾ ಹಾಲ್ ಆಫ್ ಫೇಮ್‌ಗೂ ಭಾಜನರಾಗಿದ್ದರು. ದ್ವೀಪ ರಾಷ್ಟ್ರದ ಪರಿಸರ, ಸಮುದಾಯ ಉದ್ಯಾನಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ವಿಶೇಷ ಛಾಪು ಮೂಡಿಸಿದ್ದರು ಎಂದು ಆನ್‌ಲೈನ್ ಟ್ಯಾಬ್ಲಾಯ್ಡ್ ತಬಲಾ ವರದಿ ಮಾಡಿದೆ. ವೃಕ್ಷ ಮಹಿಳೆ ಎಂದು ಕರೆಯಲ್ಪಡುತ್ತಿದ್ದ ಮೆಕಾನಿ ನಿಧನ ಸಿಂಗಾಪುರದ ಪರಿಸರ, ಕಲೆ ಮತ್ತು ನಾಗರಿಕ ಸಮುದಾಯಕ್ಕೆ ನಷ್ಟ ಉಂಟುಮಾಡಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸದ್ದಿಲ್ಲದೆ ಮತ್ತು ನಿರ್ಣಾಯಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ಮೆಕಾನಿ ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು. ತಮ್ಮ ಜಮೀನು, ಇಲ್ಲಿನ ಪರಿಸರದಿಂದ ಪ್ರಕೃತಿ ಪ್ರೀತಿ ಬೆಳೆಸಿಕೊಂಡಿದ್ದರು. ಇಲ್ಲಿನ ನಾರಿನ ಕಾಂಪೋಸ್ಟ್ ಪಿಟ್ ಅನ್ನು ಫಲವತ್ತಾದ ಮಣ್ಣಾಗಿ ಮಾರ್ಪಡಿಸುವ ಮೂಲಕ ಪ್ರಕೃತಿಯ ಪುನರುತ್ಪಾದಕ ಶಕ್ತಿಗಳತ್ತ ಗಮನ ಹರಿಸಿದ್ದರು. ಪ್ರಕೃತಿಯನ್ನು ಅರ್ಥಮಾಡಿಕೊಂಡರೆ, ಗೌರವಿಸಿದರೆ, ಮಾನವೀಯತೆಗೆ ಸುಸ್ಥಿರವಾಗಿ ಬದುಕುವುದು ಹೇಗೆಂಬುದು ಗೊತ್ತಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು.
1990ರಲ್ಲಿ ಪತಿ ಭರತ್ ಮೆಕಾನಿ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಇವರು, ಪರಿಸರ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು. ತಳಮಟ್ಟದ ಪರಿಸರ ಶಿಕ್ಷಣದಲ್ಲಿ ಆಳವಾಗಿ ಕೆಲಸ ಮಾಡಿ, ಯುವ ನಾಯಕರಿಗೆ ಮಾರ್ಗದರ್ಶನ ಮತ್ತು ಸಂಸ್ಥೆಗಳಿಗೆ ಸಲಹೆ ನೀಡುತ್ತಿದ್ದರು. ಗಾರ್ಡನ್ ಸಿಟಿ ಫಂಡ್ ಅಡಿಯಲ್ಲಿ ಸಿಂಗಾಪುರದ ರಾಷ್ಟ್ರೀಯ ಉದ್ಯಾನವನಗಳ ಮಂಡಳಿಯ ಸಹಭಾಗಿತ್ವದಲ್ಲಿ 2007ರಲ್ಲಿ ಪ್ರಾರಂಭವಾದ ಪ್ಲಾಂಟ್-ಎ-ಟ್ರೀ ಕಾರ್ಯಕ್ರಮದಲ್ಲಿ ಮೆಕಾನಿ ಭಾಗಿತ್ವವು ಅವರ ಹೆಮ್ಮೆಯ ಕಾರ್ಯಗಳಲ್ಲಿ ಒಂದಾಗಿದೆ.
ಮೆಕಾನಿ 76,000ಕ್ಕಿಂತ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಇವುಗಳಲ್ಲಿ 200ಕ್ಕೂ ಹೆಚ್ಚು ಸ್ಥಳೀಯ ಜಾತಿಗಳನ್ನು ಪರಿಚಯಿಸಿದ್ದರು. ಸಿಂಗಾಪುರದಲ್ಲಿ ನಿರಂತರವಾಗಿ ನಾಗರಿಕಚಾಲಿತ ಹಸಿರು ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. 2016ರಲ್ಲಿ ಬಯೋಮಿಮಿಕ್ರಿ ಸಿಂಗಾಪುರ್ ನೆಟ್‌ವರ್ಕ್ ಸ್ಥಾಪಿಸಿದ ಅವರು, ಇದರ ಮೂಲಕ ಪ್ರಕೃತಿಪ್ರೇರಿತ ನಾವೀನ್ಯತೆಯನ್ನು ಅನ್ವೇಷಿಸಲು ವಿಜ್ಞಾನಿಗಳು, ವಿನ್ಯಾಸಕರು, ಎಂಜಿನಿಯರ್‌ಗಳು ಮತ್ತು ಉದ್ಯಮಿಗಳನ್ನು ಒಂದುಗೂಡಿಸಿದರು. ಇವರಿಗೆ 2015ರಲ್ಲಿ ಪರಿಸರಕ್ಕಾಗಿ ಅಧ್ಯಕ್ಷೀಯ ಪ್ರಶಸ್ತಿ, ಸಿಂಗಾಪುರದ ಅತ್ಯುನ್ನತ ಪರಿಸರ ಗೌರವ, 2024ರಲ್ಲಿ ಪರಿಸರ ಚಾಂಪಿಯನ್ ಆಗಿ ಸಿಂಗಾಪುರದ ಮಹಿಳಾ ಹಾಲ್ ಆಫ್ ಫೇಮ್ ಗೌರವ ಲಭಿಸಿತ್ತು.
