ಉದಯವಾಹಿನಿ, ಸ್ನೇಹ ಸಂಬಂಧದ ಸುತ್ತ ಕಥೆ ಹೆಣೆಯಲಾದ ‘ಲೈಫ್ ಎಲ್ಲಿಂದ ಎಲ್ಲಿಗೆ’ ಎಂಬ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ. ಮೂವರು ಪ್ರಾಣ ಸ್ನೇಹಿತರ ಲೈಫ್ ಜರ್ನಿ ಕಥೆ ಇದಾಗಿದ್ದು, ಅವರೆಲ್ಲ ಸೇರಿ ಒಂದು ಟ್ರಿಪ್ ಹೋದಾಗ ಏನಾಗುತ್ತೆ ಎಂಬುದನ್ನು ನಿರ್ದೇಶಕ ಅರ್ಜುನ್ ಶಿವನ್ ಅವರು ಅದ್ಭುತವಾದ ಭಾವನಾತ್ಮಕ ಕಥಾಹಂದರ ಹೆಣೆದು ಈ ಚಿತ್ರವನ್ನು ನಿರೂಪಿಸುತ್ತಿದ್ದಾರೆ. ಲೈಫ್ ಎಲ್ಲಿಂದ ಎಲ್ಲಿಗೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಲೆನಿನ್, ಮಂಜುನಾಥ್, ಕ್ರಿಶ್, ಅರ್ಜುನ್ ಶಿವನ್ ಅಲ್ಲದೆ ನಾಯಕಿಯಾಗಿ ಅನು ಪ್ರೇಮ ನಟಿಸಿದ್ದಾರೆ.
ವಿಪ್ರ ವೆಂಚರ್ಸ್ ಮೂಲಕ ಮುಳ್ಳೂರು ಗುರುಪ್ರಸಾದ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸದ್ಯ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರದ ಮೊದಲ ಭಾಗವಾಗಿ ಈ ಚಿತ್ರದ ಎರಡು ಹಾಡುಗಳ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಸುಬ್ರಮಣ್ಯ ಶರ್ಮ, ಇಳಯ ಆಳ್ವ ಗುರೂಜಿ ಹಾಗೂ ಇತರ ಗಣ್ಯರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾಸ್ಕರ ರಾವ್ ಮಾತನಾಡುತ್ತ ಮನಸಿನ ನೋವು, ಸಂಕಟವನ್ನು ಮರೆಯಲು ಸಿನಿಮಾ ಸಹಕಾರಿ ಆಗುತ್ತೆ, ಈ ಹಾಡು ನೋಡಿದ್ರೆ ಸಿನಿಮಾ ನೋಡಬೇಕು ಎನಿಸುತ್ತದೆ ಎಂದರು.
