ಉದಯವಾಹಿನಿ, ಬೆಳಗಾವಿ: ಸುದೀರ್ಘ 40 ವರ್ಷಗಳ ಕಾರ್ಯಾಧ್ಯಕ್ಷರಾಗಿ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆಯ ನೊಗ ಹೊತ್ತಿದ್ದ ಡಾ. ಪ್ರಭಾಕರ ಕೋರೆ ಈಗ ಆ ಸ್ಥಾನದಿಂದ ಮುಕ್ತರಾಗಿದ್ದಾರೆ.
ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಿದ್ದ ನಾಮಪತ್ರವನ್ನು ದಿಢೀರ್ ಹಿಂದಕ್ಕೆ ಪಡೆದು ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಹುದ್ದೆಗೆ ಮೊದಲು ನಾಮಪತ್ರವನ್ನು ಪ್ರಭಾಕರ ಕೋರೆ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರ ವಾಪಸ್ ಪಡೆಯುವ ಮೂಲಕ ಅಚ್ಚರಿಯ ನಿರ್ಧಾರವನ್ನು ಕೈಗೊಂಡಿದ್ದಾರೆ. 1984 ರಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಬಳಿಕ ಸುದೀರ್ಘ ಅವಧಿಗೆ ಕಾರ್ಯಾಧ್ಯಕ್ಷ ಹುದ್ದೆ ನಿರ್ವಹಿಸಿದ್ದರು. ಕೋರೆ ಅಧಿಕಾರ ವಹಿಸಿಕೊಂಡಾಗ ಕೇವಲ 40 ಅಂಗ ಸಂಸ್ಥೆಗಳನ್ನು ಕೆಎಲ್ಇ ಹೊಂದಿತ್ತು. ಆದರೆ ಈಗ ಇದು 240 ಅಂಗ ಸಂಸ್ಥೆ ಹೊಂದುವ ಮೂಲಕ ಬೃಹತ್ ಸಂಸ್ಥೆಯಾಗಿ ಬೆಳೆದಿದೆ.
ಕೆಎಲ್ಇ ನಿರ್ದೇಶಕ ಹುದ್ದೆಗೆ ಕಣದಲ್ಲಿದ್ದ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಡಾ. ವಿಶ್ವನಾಥ್ ಪಾಟೀಲ ಸೇರಿ 14 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಡಾ. ಪ್ರಭಾಕರ ಕೋರೆ ಪುತ್ರಿ ಪ್ರೀತಿ ಕೋರೆ ಕೆಎಲ್ಇ ಸಂಸ್ಥೆಯ ನೂತನ ಮಹಿಳಾ ಸಾರಥಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಾಧ್ಯಕ್ಷ ಹುದ್ದೆಗೇರುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರವಾಗಿದ್ದಾರೆ. ದೇಶದ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆಎಲ್ಇ ಸಂಸ್ಥೆಗೆ ಶತಮಾನಗಳಷ್ಟು ಇತಿಹಾಸವಿದೆ. ಅವಿರೋಧವಾಗಿ ಆಯ್ಕೆ ಆಗಿರುವ ಪ್ರೀತಿ ಕೋರೆ ತಂದೆಯ ಜಾಗ ತುಂಬಲು ಅಣಿಯಾಗಿದ್ದಾರೆ.
