ಉದಯವಾಹಿನಿ, ಲಖನೌ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಡಿಯಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ಅಂಗವೈಕಲ್ಯಕ್ಕೆ ಸಂಬಂಧಿಸಿದ ರಿಯಾಯಿತಿಗಳನ್ನು ಪಡೆಯಲು 24 ವರ್ಷದ ಯುವಕನೊಬ್ಬ ತನ್ನ ಕಾಲಿನ ಒಂದು ಭಾಗವನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ. ಈ ರೀತಿ ಹುಚ್ಚಾಟ ಮೆರೆದ ವ್ಯಕ್ತಿಯನ್ನು ಸೂರಜ್ ಭಾಸ್ಕರ್ ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿಪುರ ನಿವಾಸಿ.
ಈ ಘಟನೆ ಜನವರಿ 18ರಂದು ನಡೆದಿದ್ದರೂ, ಆರಂಭದಲ್ಲಿ ಹಲ್ಲೆ ಪ್ರಕರಣ ಎಂದು ಬಿಂಬಿತವಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗ ಜನವರಿ 23ರಂದು ಸತ್ಯ ವಿಚಾರ ಬೆಳಕಿಗೆ ಬಂದಿದೆ.ಪೊಲೀಸರ ಪ್ರಕಾರ ಸೂರಜ್ ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ತನ್ನ ಪಾದದ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ. ಅಂಗವೈಕಲ್ಯ ಪ್ರಮಾಣ ಪತ್ರವು ಇದ್ದರೆ ಮೆಡಿಕಲ್ ಸೀಟ್ ಸಿಗಲು ನೀಟ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದರೆ ಸಾಕಾಗುತ್ತದೆ. ಸೂರಜ್ ಡಿಪ್ಲೊಮಾ ಇನ್ ಫಾರ್ಮಸಿ (ಡಿ.ಫಾರ್ಮ್) ಪೂರ್ಣಗೊಳಿಸಿದ್ದು, ಎಂಬಿಬಿಎಸ್ ಪದವಿ ಪಡೆಯಲು ನೀಟ್‌ಗೆ ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸೂರಜ್ ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದ್ದ. ಕೊಲೆ ಯತ್ನದ ಆರೋಪದ ಮೇಲೆ ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಜನವರಿ 18ರ ಮಧ್ಯಾಹ್ನ ಸೂರಜ್ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು ಎಂದು ನಗರ ವೃತ್ತ ಅಧಿಕಾರಿ ಗೋಲ್ಡಿ ಗುಪ್ತಾ ತಿಳಿಸಿದ್ದಾರೆ. ಅಧಿಕಾರಿಗಳಿಗೆ ಆರಂಭದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮರುದಿನ ಬೆಳಗ್ಗೆ ಪ್ರಜ್ಞೆ ಬಂದಾಗ, ತನ್ನ ಎಡಗಾಲು ಕತ್ತರಿಸಲ್ಪಟ್ಟಿತ್ತು, ಹಿಮ್ಮಡಿ ಮಾತ್ರ ಉಳಿದಿತ್ತು ಎಂದು ಸೂರಜ್ ಹೇಳಿಕೊಂಡಿದ್ದ.
