ಉದಯವಾಹಿನಿ, ಮುಂಬೈ: ಸರೋವರದಲ್ಲಿ ನೀರಿನ ಮಟ್ಟ ಇಳಿಕೆಯಾಗುವುದನ್ನು ನೀವು ಓದಿರಬಹುದು. ಆದರೆ ಮಹಾರಾಷ್ಟ್ರದಲ್ಲಿರುವ ಪ್ರಸಿದ್ಧ ಲೋನಾರ್ ಸರೋವರದಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು ಕಳವಳಕ್ಕೆ ಕಾರಣವಾಗಿದೆ.
ಹೌದು. ಬುಲ್ಧಾನಾ ಜಿಲ್ಲೆಯಲ್ಲಿರುವ ಉಲ್ಕಾಶಿಲೆ ಪ್ರಭಾವದಿಂದ ರೂಪುಗೊಂಡ, ಉಪ್ಪು ನೀರಿನ ಲೋನಾರ್ ಸರೋವರದಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಸರೋವರದ ಸುತ್ತಲು ಇರುವ ನಾಲ್ಕು ಬುಗ್ಗೆಗಳಿಂದ 4-5 ತಿಂಗಳಿನಲ್ಲಿ ಸುಮಾರು 15 ರಿಂದ 20 ಅಡಿ ನೀರು ಏರಿಕೆಯಾಗಿದೆ.
ನೀರಿನ ಏರಿಕೆಯಿಂದಾಗಿ ಸರೋವರದ ಜೀವವೈವಿಧ್ಯತೆಗೆ ಎದುರಾಗಿರುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ನ್ಯಾ. ಅನಿಲ್ ಕಿಲೋರ್ ಮತ್ತು ನ್ಯಾ.ರಾಜ್ ವಕೋಡ್ ಅವರನ್ನೊಳಗೊಂಡ ಪೀಠವು ವಕೀಲ ಮೋಹಿತ್ ಖಜಾಂಚಿ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿದೆ ಮತ್ತು ಮುಂದಿನ ಏಳು ದಿನಗಳಲ್ಲಿ ವಿವರವಾದ ಪಿಐಎಲ್ ಸಲ್ಲಿಸುವಂತೆ ನಿರ್ದೇಶಿಸಿದೆ. ನೀರಿನ ಮಟ್ಟ ಏರಿಕೆಯಿಂದಾಗಿ ದಡದಲ್ಲಿದ್ದ ಹಲವಾರು ಪ್ರಾಚೀನ ಶಿವ ದೇವಾಲಯಗಳು ಮುಳುಗಿವೆ. ವಿಶ್ವಪ್ರಸಿದ್ಧ ಕಮಲಜಾ ದೇವಿ ದೇವಾಲಯದ ಗರ್ಭಗುಡಿಗೂ ನೀರು ಪ್ರವೇಶಿಸಿದೆ. ದೇವಾಲಯದ ಮುಂಭಾಗದಲ್ಲಿರುವ ದೀಪಸ್ತಂಭ ಹಿಂದೆ ಸಂಪೂರ್ಣವಾಗಿ ಗೋಚರಿಸುತ್ತಿತ್ತು. ಆದರೆ ಈಗ ಅರ್ಧ ಮುಳುಗಡೆಯಾಗಿದೆ.
