ಉದಯವಾಹಿನಿ, ಇಸ್ಲಾಮಾಬಾದ್‌: ಖೈಬರ್ ಪಸ್ತುಂಖ್ಯಾ ಪ್ರಾಂತ್ಯದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿ ತಿಳಿಸಿದೆ. ಇದರಿಂದಾಗಿ, ದೇಶೀಯ ತೈಲ ಪೂರೈಕೆಗೆ ಬಲ ಬರಲಿದ್ದು, ಪಾಕಿಸ್ತಾನಕ್ಕೆ ಇಂಧನ ಭದ್ರತೆ ದೊರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾವಿಯಿಂದ ದಿನಕ್ಕೆ 3,100 ಬ್ಯಾರಲ್‌ನಷ್ಟು ತೈಲ ಹಾಗೂ ಪ್ರತಿನಿತ್ಯ 8.15 ದಶಲಕ್ಷ ಘನ ಅಡಿಯಷ್ಟು ಅನಿಲ ಹರಿಯುತ್ತದೆ ಎಂಬುದು ಸಮನ ಸುಕ್ ಹಾಗೂ ಶಿನವಾರಿ ರಚನೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಒಜಿಡಿಸಿಎಲ್ ಮಾಹಿತಿ ನೀಡಿದೆ.
‘ದೇಶದಲ್ಲಿ ಇಂಧನಕ್ಕೆ ಇರುವ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರವನ್ನು ತಗ್ಗಿಸಲು ಈ ನಿಕ್ಷೇಪ ದೊಡ್ಡ ಕೊಡುಗೆ ನೀಡಲಿದೆ. ಇದು ದೇಶದಲ್ಲಿ ಹೈಡೋಕಾರ್ಬನ್ ನಿಕ್ಷೇಪಗಳ ನೆಲೆಗಳನ್ನು ಹೆಚ್ಚಿಸಲಿದ್ದು ಹಾಗೂ ಉದ್ಯಮ ಪಾಲುದಾರರನ್ನು ಆಕರ್ಷಿಸಲಿದೆ’ ಎಂದೂ ಹೇಳಿಕೆ ಬಿಡುಗಡೆ ಮಾಡಿದೆ.
ತನ್ನದೇ ಕಚ್ಚಾ ತೈಲ ಹಾಗೂ ಅನಿಲ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ದುಬಾರಿ ತೈಲದ ಆಮದನ್ನು ತಗ್ಗಿಸಲು, ಆ ಮೂಲಕ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದರತ್ತ ಪಾಕಿಸ್ತಾನ ಗಮನ ಹರಿಸುತ್ತಿದೆ. ಅದರಲ್ಲೂ, ಬಿಕ್ಕಟ್ಟಿನಲ್ಲಿರುವ ತನ್ನ ಆರ್ಥಿಕತೆಗೆ ಪುನಶ್ಚತನ ನೀಡುವ ಕಡೆಗೆ ಆಲೋಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಗರದಾಳದಲ್ಲಿ ಮೂರು ಹಾಗೂ ಭೂಮಿಯಲ್ಲಿ ಎರಡು ಕಡೆ ತೈಲ ಘಟಕಗಳ ಅಭಿವೃದ್ಧಿ, ಪರಿಶೋಧನೆಗಾಗಿ, ಪಾಕಿಸ್ತಾನವು ಸ್ಥಳೀಯ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳೊಂದಿಗೆ ಐದು ಒಪ್ಪಂದಗಳನ್ನು ಕಳೆದ ವರ್ಷಾಂತ್ಯದಲ್ಲಿ ಮಾಡಿಕೊಂಡಿತ್ತು.
ಮಾರಿ ಎನರ್ಜೀಸ್, ಒಜಿಡಿಸಿಎಲ್, ಪಾಕಿಸ್ತಾನ ಪೆಟ್ರೋಲಿಯಂ, ಫಾತಿಮಾ ಪೆಟ್ರೋಲಿಯಂ, ಗವರ್ನಮೆಂಟ್ ಹೋಲ್ಡಿಂಗ್ಸ್‌ ಲಿಮಿಟೆಡ್ ಹಾಗೂ ಟರ್ಕಿಶ್ ಪೆಟ್ರೋಲಿಯಂ ಓವರ್‌ಸೀಸ್ ಕಂಪನಿ (ಟಿಪಿಎಒ) ಒಪ್ಪಂದಲ್ಲಿ ಭಾಗಿಯಾಗಿವೆ.
ಪಾಕಿಸ್ತಾನ ಸರ್ಕಾರ, 2025ರ ನವೆಂಬರ್‌ನಲ್ಲಿ 40 ಘಟಕಗಳನ್ನು ಹರಾಜು ಹಾಕಿತ್ತು. ಇದರಲ್ಲಿ, 23ಕ್ಕೆ ಸ್ಥಳೀಯ ಇಂಧನ ಕಂಪನಿಗಳು ಮತ್ತು ಟರ್ಕಿಯ ಸರ್ಕಾರಿ ಸ್ವಾಮ್ಯದ ಪ್ರಮುಖ ಇಂಧನ ಕಂಪನಿ ‘ಟಿಪಿಎಒ’ ಬಿಡ್ ಸಲ್ಲಿಸಿದ್ದವು. ಇವು, ನಿಕ್ಷೇಪಗಳ ಪರಿಶೋಧನೆಯ ಭಾಗವಾಗಿ 80 ದಶಲಕ್ಷ ಡಾಲರ್ (ಅಂದಾಜು ₹ 734 ಕೋಟಿ) ಹೂಡಿಕೆಗೆ ಬದ್ಧವಾಗಿವೆ. ತೈಲ ಉತ್ಪಾದನೆ ಸಾಧ್ಯವಾದರೆ, ಹೂಡಿಕೆ ಮೊತ್ತವು 1 ಬಿಲಿಯನ್ ಡಾಲರ್‌ಗೆ (ಅಂದಾಜು 9 ಸಾವಿರ ಕೋಟಿಗೆ) ತಲುಪುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!