ಉದಯವಾಹಿನಿ, ಪ್ಯಾರಿಸ್: ಸಾಮೂಹಿಕ ಪ್ರತಿಭಟನೆ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆಗೆ ಪ್ರತಿಯಾಗಿ ಇರಾನ್ ಕೂಡ ಇದೀಗ ವಾಷಿಂಗ್ಟನ್ಗೆ ಪ್ರತಿದಾಳಿ ಮಾಡುವ ಹೇಳಿಕೆ ನೀಡಿದ್ದು, ನಮ್ಮ ಬೆರಳುಗಳು ಟ್ರಿಗರ್ ಮೇಲಿದೆ ಎಂದು ಇರಾನ್ ಕ್ರಾಂತಿಕಾರಿ ಗಾರ್ಡ್ ನೇರ ಎಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಹೊಸ ಮಿಲಿಟರಿ ಕ್ರಮದ ಆಯ್ಕೆಯನ್ನು ಪದೇ ಪದೆ ಹೇಳುತ್ತಿದ್ದು, ಟೆಹ್ರಾನ್ ಇದನ್ನು ಗಮನಿಸುತ್ತಿದ್ದು, ಅಮೆರಿಕದ ಶಸ್ತ್ರಸಜ್ಜಿತ ನೌಕಪಡೆ ಗಲ್ಫ್ ಕಡೆ ಸಾಗುತ್ತಿದೆ ಎಂದು ಗುರುವಾರ ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಜನರಲ್ ಮೊಹಮ್ಮದ್ ಪಾಕ್ಪೂರ್, ಇರಾನ್ ಎಂದಿಗಿಂತಲೂ ಹೆಚ್ಚು ಸಿದ್ಧವಾಗಿದೆ. ಸರ್ವೋಚ್ಚ ನಾಯಕರ ಆದೇಶ ಹಾಗೂ ತಾವೂ ಕೂಡಾ ದಾಳಿಗೆ ಪ್ರತಿದಾಳಿ ನಡೆಸಲು ಸಿದ್ಧವಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಬ್ಬ ಹಿರಿಯ ಸೇನಾ ಅಧಿಕಾರಿ ಜನರಲ್ ಅಲಿ ಅಬ್ದುಲ್ಲಾಹಿ ಅಲಿಯಾಬಾದಿ ಮಾತನಾಡಿ, ಅಮೆರಿಕ ದಾಳಿ ಮಾಡಿದರೆ ಅವರ ಎಲ್ಲಾ ಹಿತಾಸಕ್ತಿ ನೆಲೆಗಳು ಮತ್ತು ಪ್ರಭಾವಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಸಶಸ್ತ್ರ ಪಡೆ ದಾಳಿ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ
ಡಿಸೆಂಬರ್ ಅಂತ್ಯದಿಂದ ಇರಾನ್ನಲ್ಲಿ ಆರಂಭವಾಗಿರುವ ಪ್ರತಿಭಟನೆಯು, ಇರಾನಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಇರಾನ್‌ನ ಕ್ಲೆರಿಕಲ್ ನಾಯಕತ್ವಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ. ಪ್ರತಿಭಟನೆ ಹೆಚ್ಚಾದ ಬೆನ್ನಲ್ಲೇ ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದ್ದು, ಈ ಪ್ರತಿಭಟನೆಯಲ್ಲಿ ಸಾವಿರಾರು ಜನರು ಹತರಾಗಿದ್ದಾರೆ.
ಟೆಹ್ರಾನ್ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕ ಹೇಳುತ್ತಿದ್ದರೂ ಎರಡು ದೇಶಗಳು ರಾಜತಾಂತ್ರಿಕತೆಗೆ ಅವಕಾಶವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಟ್ರಂಪ್, ಅಗತ್ಯಬಿದ್ದಲ್ಲಿ ಇರಾನ್ ಕಡೆಗೆ ಏರ್ಫೋರ್ಸ್ ಒನ್ ಕಳುಹಿಸಲಾಗುವುದು. ಏನಾದರೂ ಆಗುವ ಮುಂಚೆ ಏನಾಗುತ್ತಿದೆ ಎಂದು ಸೂಕ್ಷ್ಮವಾಗಿ ನಾವು ಗಮನಿಸುತ್ತೇವೆ ಎಂದಿದ್ದಾರೆ.
ಖಮೇನಿ ಬೆದರಿಕೆ ಬೆನ್ನಲ್ಲೇ ಮಂಗಳವಾರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಹತ್ಯೆಗೆ ಸಂಚು ರೂಪಿಸಿದ್ದೇ ಆದರೆ, ಇರಾನ್ ಅನ್ನು ಈ ಭೂಮಿಯ ಮೇಲಿಂದ ಅಳಿಸಿ ಹಾಕುವುದಾಗಿ ಇರಾನಿ ನಾಯಕರಿಗೆ ಎಚ್ಚರಿಕೆ ನೀಡಿದ್ದರು.
