ಉದಯವಾಹಿನಿ, : ಅಮೆರಿಕ ಭಾರತ ಮೇಲೆ ಭಾರೀ ಸುಂಕ ವಿಧಿಸಿದ ಬಳಿಕವೂ, ಭಾರತೀಯ ಆರ್ಥಿಕತೆ ಯಾವುದೇ ಅಲುಗಾಡಿಕೆಯಿಲ್ಲದೆ ಸ್ಥಿರವಾಗಿ ನಿಂತಿದೆ. ಇಷ್ಟೊಂದು ದೊಡ್ಡ ಸವಾಲಿನ ನಡುವೆಯೂ ಭಾರತ ತನ್ನ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದು, ಅನೇಕ ರಾಷ್ಟ್ರಗಳ ಗಮನವನ್ನು ತನ್ನತ್ತ ಸೆಳೆದಿದೆ.ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸಿರುವ ವೇಗದ ಅಭಿವೃದ್ಧಿ, ಉದ್ಯೋಗ ಕ್ಷೇತ್ರದಲ್ಲಿ ವಿದೇಶಗಳಲ್ಲಿ ಭಾರತೀಯರ ಹೆಚ್ಚುತ್ತಿರುವ ಹಾಜರಿ ಮತ್ತು ಜಾಗತಿಕ ರಾಜಕೀಯದಲ್ಲಿನ ಪ್ರಭಾವ, ಭಾರತವನ್ನು ಭವಿಷ್ಯದ ಸೂಪರ್ ಪವರ್ ಎಂದು ನೋಡುವಂತೆ ಮಾಡಿದೆ. ಇದರಿಂದಾಗಿ ಕೆಲ ರಾಷ್ಟ್ರಗಳು ಭಾರತವನ್ನು ಹತ್ತಿಕ್ಕುವ ಪ್ರಯತ್ನಗಳನ್ನೂ ಮಾಡುತ್ತಿರುವುದು ಕಂಡುಬರುತ್ತಿದೆ.
ಅಮೆರಿಕ ವಿಧಿಸಿದ ಸುಂಕಗಳ ಬಳಿಕ ಭಾರತ ಅನೇಕ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿತು. ಪರಿಣಾಮವಾಗಿ ಹಲವು ರಾಷ್ಟ್ರಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದೆ ಬಂದವು. ಯುರೋಪಿಯನ್ ಒಕ್ಕೂಟವು ಭಾರತವಿಲ್ಲದೆ ತನ್ನ ಕಾರ್ಯತಂತ್ರ ಅಪೂರ್ಣ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ವರ್ಷದ ಜನವರಿ 26ರಂದು ನಡೆಯಲಿರುವ ಭಾರತದ ಗಣರಾಜ್ಯೋತ್ಸವಕ್ಕೆ ಯುರೋಪಿಯನ್ ಒಕ್ಕೂಟದ ಉನ್ನತ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದು ಕೇವಲ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬಲವಾದ ರಾಜತಾಂತ್ರಿಕ ಸಂದೇಶವನ್ನು ನೀಡುತ್ತಿದೆ.
ಭಾರತ ಭೇಟಿಗೆ ಮುಂಚೆಯೇ ಯುರೋಪಿಯನ್ ಒಕ್ಕೂಟ, “ಭಾರತ ಭವಿಷ್ಯದ ಮಹಾನ್ ಶಕ್ತಿ” ಎಂದು ಒಪ್ಪಿಕೊಂಡಿದ್ದು, ಭಾರತವಿಲ್ಲದೆ ನಾವು ಅಪೂರ್ಣರು ಎಂಬ ಹೇಳಿಕೆಯನ್ನು ನೀಡಿದೆ. ಇದು ಭಾರತದ ಜಾಗತಿಕ ಪ್ರಭಾವ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಯುರೋಪಿಯನ್ ಒಕ್ಕೂಟ ಒಟ್ಟಿಗೆ ನಿಲ್ಲುವ ಸೂಚನೆಗಳು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಯುರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ಸಿಗುತ್ತಿರುವ ಬೆಂಬಲ, ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
