ಉದಯವಾಹಿನಿ, : ಈಗ ಏನಿದ್ದರೂ ಜೆನ್ ಝೀ ತಲೆಮಾರಿನ ಯುವಕರದ್ದೇ ಜಮಾನ. ಎಲ್ಲರ ಅಂಗೈಯಲ್ಲೂ ಸ್ಮಾರ್ಟ್‌ಫೋನ್, ಎಲ್ಲರಿಗೂ ಇಂಟರ್‌ನೆಟ್ ಸಂಪರ್ಕ ಲಭ್ಯವಿದ್ದರೂ, ಅದನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವುದು ಮಾತ್ರ ಇಂದಿನ ಜೆನ್ ಝೀ ತಲೆಮಾರು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಇದೇ ಜೆನ್ ಝೀ ತಲೆಮಾರು, ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯೊಂದನ್ನು ಇಲ್ಲೊಂದು ಚಿತ್ರತಂಡ ಸಿನಿಮಾದ ಮೂಲಕ ತೆರೆಮೇಲೆ ತರಲು ಹೊರಟಿದೆ. ಅಂದಹಾಗೆ, ಆ ಚಿತ್ರಕ್ಕೆ ಇಂದಿರಾ ಎಂದು ಹೆಸರಿಡಲಾಗಿದ್ದು, ಚಿತ್ರದ ಶೀರ್ಷಿಕೆಗೆ ಜೆನ್ ಝೀ ಎಂಬ ಅಡಿಬರಹವಿದೆ.
ಈ ಹಿಂದೆ ರಾವೆನ್ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ವೇದ್, ಇಂದಿರಾ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಕಿರಣ್ ಫಿಲ್ಮ್ಸ್ ಸಂಸ್ಥೆಯ ಅಡಿಯಲ್ಲಿ ಕಿರಣ್ ಕುಮಾರ್ ಎಂ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಮತ್ತು ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿ ಅನುಭವವಿರುವ ಕಿರಣ್ ಕುಮಾರ್ ಇಂದಿರಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕರಾದ ಟಿ. ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಗೌರವ ಕಾರ್ಯದರ್ಶಿ ಭಾ. ಮ. ಗಿರೀಶ್, ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಹಾಜರಿದ್ದು, ಇಂದಿರಾ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
