ಉದಯವಾಹಿನಿ, : ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಆಡಂ ಮಿಲ್ನೆ ಅವರು 2026ರ ಐಸಿಸಿ ಟಿ20 ವಿಶ್ವಕಪ್ ) ಟೂರ್ನಿಯಿಂದ ಹೊರ ನಡೆದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯ ಪಂದ್ಯದ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇದೀಗ ಇವರ ಸ್ಥಾನಕ್ಕೆ ನ್ಯೂಜಿಲೆಂಡ್ ಟಿ20 ವಿಶ್ವಕಪ್ ಟೂರ್ನಿಯ ತಂಡಕ್ಕೆ ಕೈಲ್ ಜೇಮಿಸನ್ ಸೇರ್ಪಡೆಯಾಗಿದ್ದಾರೆ. ಫೆಬ್ರವರಿ 7ರಂದು ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.
ಆಡಂ ಮಿಲ್ನೆ ಅವರು ದಕ್ಷಿಣ ಆಫ್ರಿಕಾ ಟಿ2 ಟೂರ್ನಿಯ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ಆಡುತ್ತಿದ್ದಾರೆ. ಈ ವಾರ ಎಂಐ ಕೇಪ್ ವಿರುದ್ಧದ ಪಂದ್ಯದ ವೇಳೆ ಆಡಂ ಮಿಲ್ನೆ ಅವರು ಬೌಲಿಂಗ್ ವೇಳೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಅವರ ಗಾಯ ಗಂಭೀರವಾಗಿರುವ ಪತ್ತೆಯಾಗಿದೆ ಹಾಗಾಗಿ ಅವರು ಮುಂದಿನ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. “ಆಡಮ್‌ಗಾಗಿ ನಾವೆಲ್ಲರೂ ದುಃಖಿತರಾಗಿದ್ದೇವೆ. ಅವರು ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧರಾಗಲು ತುಂಬಾ ಶ್ರಮಿಸಿದ್ದರು ಮತ್ತು ಈಸ್ಟರ್ನ್ ಕೇಪ್ ಸನ್‌ರೈಸರ್ಸ್‌ಗಾಗಿ ತಮ್ಮ ಎಂಟು ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು,” ಎಂದು ಹೆಡ್ ಕೋಚ್ ರಾಬ್ ವಾಲ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಪ್ರಯಾಣ ಮೀಸಲು ಆಟಗಾರನಾಗಿದ್ದ ಕೈಲ್ ಜೇಮಿಸನ್ ಅವರನ್ನು ಇದೀಗ ಅಧಿಕೃತವಾಗಿ ನ್ಯುಜಿಲೆಂಡ್ ತಂಡಕ್ಕೆ ಸೇರಿಸಲಾಗಿದೆ. ಪ್ರಸ್ತುತ ಕೈಲ್ ಜೇಮಿಸನ್ ಅವರು ಭಾರತ ವಿರುದ್ಧದ ವೈಟ್‌ಬಾಲ್ ಸರಣಿಯಲ್ಲಿ ಆಡುತ್ತಿದ್ದಾರೆ. ಅವರು ಚುಟುಕು ವಿಶ್ವಕಪ್ ನಿಮಿತ್ತ ಕಿವೀಸ್ ಪರ ಬೌಲಿಂಗ್ ನಡೆಸಲಿದ್ದಾರೆ.
