ಉದಯವಾಹಿನಿ , ಹುಬ್ಬಳ್ಳಿ: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರ ನವದೆಹಲಿಯ ಗೃಹ ಕಚೇರಿ ಮತ್ತು ಹುಬ್ಬಳ್ಳಿ ಕಾರ್ಯಾಲಯದಲ್ಲಿ ಸ್ತ್ರೀ ಸಬಲೀಕರಣದ ಪ್ರತೀಕವಾಗಿ 77ನೇ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ನವದೆಹಲಿಯ ) ಗೃಹ ಕಚೇರಿ ಆವರಣದಲ್ಲಿ ಸಚಿವರು ತಮ್ಮ ಸಹೋದ್ಯೋಗಿಗಳು ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಇನ್ನೂ ಹುಬ್ಬಳ್ಳಿ ಕಾರ್ಯಾಲಯದಲ್ಲಿ ಸ್ತ್ರೀ ಗೌರವದ ಪ್ರತೀಕ ಎನ್ನುವಂತೆ `ಸ್ವಚ್ಛ ವಾಹಿನಿ ಮಹಿಳಾ ಚಾಲಕಿ’ಯಿಂದ ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿ ಕಾರ್ಯಾಲಯದಲ್ಲಿ ಬೇಲೂರು ಗ್ರಾ.ಪಂ ಸ್ವಚ್ಛ ವಾಹಿನಿ ವಾಹನ ಚಾಲಕಿ 57 ವರ್ಷದ ಕಲ್ಲವ್ವ ಗಾಳಿ ಅವರಿಂದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಅತ್ಯಂತ ಸಡಗರದಿಂದ ಆಚರಿಸಲಾಯಿತು. `ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಸ್ಥೆ’ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಸ್ವಚ್ಛ ಭಾರತ್ ಅಭಿಯಾನದಲ್ಲಿ ತೊಡಗಿರುವ ಘಟಕಗಳ ಸ್ವಚ್ಛ ವಾಹಿನಿ ಮಹಿಳಾ ಚಾಲಕಿಯರು ಧ್ವಜಾರೋಹಣ ನೆರವೇರಿಸಿದ್ದು ಸ್ತ್ರೀ ಸಬಲತೆಗೆ ಸಾಕ್ಷಿಯಂತಿತ್ತು.
130 ಸ್ವಚ್ಛ ವಾಹಿನಿ ಚಾಲಕಿಯರಿಗೆ ಸನ್ಮಾನ:
ಇದೇ ವೇಳೆ ಸ್ವಚ್ಛ ವಾಹಿನಿ ವಾಹನಗಳ 130ಕ್ಕೂ ಅಧಿಕ ಚಾಲಕಿಯರನ್ನು ಗೌರವಿಸಿ, ಸನ್ಮಾನಿಸಲಾಯಿತು. “ನಗರ ಮಾತ್ರವಲ್ಲದೆ ಗ್ರಾಮಗಳಲ್ಲಿ ಸಹ ಪರಿಸರ ನೈರ್ಮಲ್ಯ ಕಾಪಾಡುವಲ್ಲಿ ಈ ಮಹಿಳಾ ಪಾತ್ರ ಅನನ್ಯವಾದುದು. ಕಸ ವಿಲೇವಾರಿಯಲ್ಲಿ ಚಾಲಕಿಯರ ಪಾತ್ರ ಅನನ್ಯವಾಗಿದೆ ಎಂದು ಪ್ರಹ್ಲಾದ್ ಜೋಶಿ ಸ್ಮರಿಸಿದರು. ಇಂದಿನ ಆಧುನಿಕ ದಿನಮಾನದಲ್ಲಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಿ, ಗ್ರಾಮೀಣರ ಜನಜೀವನವನ್ನು ಸುಂದರಗೊಳಿಸುತ್ತಿರುವ ಈ ಸ್ವಚ್ಛತಾ ವಾಹನ ಚಾಲಕಿಯರು ಗ್ರಾಮೀಣ ಭಾಗದ ಸ್ವಚ್ಛತಾ ರಾಯಭಾರಿಗಳಾಗಿದ್ದಾರೆ ಎಂದು ಬಣ್ಣಿಸಿದರು.
