ಉದಯವಾಹಿನಿ , ವಿಜಯಪುರ: ರಾಜ್ಯದಲ್ಲಿ ಎಸ್‌ಐಆರ್ ಜಾರಿಗೊಳಿಸಿ, ಅಕ್ರಮ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಗಡೀಪಾರು ಮಾಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಪತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಬಾಂಗ್ಲಾದೇಶೀಯರನ್ನು ಎಸ್‌ಐಆರ್ ಮಾದರಿಯಂತೆ ಪತ್ತೆ ಮಾಡಿ, ಅವರ ದಾಖಲಾತಿಯನ್ನು ಅಳಿಸುವುದು ಹಾಗೂ ಅವರ ದೇಶಕ್ಕೆ ಗಡಿಪಾರು ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಲ್ಲದೆ ಆಧಾರ್ ಕಾರ್ಡ್ ಸೇರಿದಂತೆ ಅನೇಕ ಗುರುತಿನ ಚೀಟಿಯನ್ನು ಪಡೆದು ಸ್ಥಳೀಯ ದೇಶವಾಸಿಗಳಿಗೆ ಸಲ್ಲಬೇಕಾಗಿದ್ದ ಸಂಪನ್ಮೂಲಗಳನ್ನು ಬಳಸುತ್ತಿರುವುದು ದುರದೃಷ್ಟಕರ. ಇಲ್ಲಿ ದುಡಿಯುವ ಹಣವನ್ನು ಬಾಂಗ್ಲಾದೇಶಕ್ಕೆ ರವಾನಿಸಿ ಭಾರತವನ್ನು ಅಭದ್ರಗೊಳಿಸಲು ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವ ಬಗ್ಗೆಯೂ ಗೊತ್ತಾಗಿದೆ ಎಂದಿದ್ದಾರೆ.
