ಉದಯವಾಹಿನಿ, ಬೆಂಗಳೂರು: ‘ವಿಬಿ ಗ್ರಾಮ್ ಜಿ’ ಯೋಜನೆಯು ಮಹಾತ್ಮ ಗಾಂಧಿಯವರ ಚಿಂತನೆ ಮತ್ತು ಅವರ ಗ್ರಾಮ ಸ್ವರಾಜ್ಯದ ಆಶಯದ ಮೇಲಿನ ಗದಾಪ್ರಹಾರ. ಕೇಂದ್ರ ಸರ್ಕಾರವು ಈ ಜನವಿರೋಧಿ ಕಾಯ್ದೆಯನ್ನು ಹಿಂಪಡೆದು, ಮನರೇಗಾ ಮರು ಜಾರಿ ಮಾಡುವವರೆಗೆ ನಾವು ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ʼನರೇಗಾ ಉಳಿಸಿ ಆಂದೋಲನ ಮತ್ತು‌ ಲೋಕಭವನ ಚಲೋʼ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುತ್ತದೆ ಎಂದು ಇದೇ ವೇಳೆ ಮಹತ್ವದ ಘೋಷಣೆ ಮಾಡಿದರು.ದೇಶದ ಲಕ್ಷಾಂತರ ಬಡ ಕುಟುಂಬಗಳಿಗೆ ವರ್ಷವಿಡೀ ಉದ್ಯೋಗ ಒದಗಿಸುತ್ತಾ, ಅವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದು ಮಾಡಿ, ಕೇಂದ್ರ ಸರ್ಕಾರ ಬಯಸಿದಾಗಷ್ಟೇ ಉದ್ಯೋಗ ನೀಡುವ ‘ವಿಬಿ ಗ್ರಾಮ್ ಜಿ’ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ.ಮಹಾತ್ಮಗಾಂಧಿ ಹೆಸರು ಕೇಳಿದರೆ ಇವರಿಗೆ ಆಗಲ್ಲ. ದುರುದ್ದೇಶದಿಂದ ಮನರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜಿ ರಾಮ್ ಜಿ’ ಜಾರಿ ಮಾಡಿದ್ದಾರೆ. ಮನರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ದಶರಥ ರಾಮ ಇಲ್ಲ, ಕೌಸಲ್ಯ ರಾಮ ಇಲ್ಲ, ಸೀತಾ ರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!