ಉದಯವಾಹಿನಿ, ಬಸ್ತಿ(ಉತ್ತರ ಪ್ರದೇಶ): ಇಂಟರ್‌ಸಿಟಿ ಸೂಪರ್‌ಫಾಸ್ಟ್ ರೈಲು ತಡವಾಗಿ ಆಗಮಿಸಿದ ಕಾರಣ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬರು 2018ರಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ತಪ್ಪಿಸಿಕೊಂಡಿದ್ದರು. ಇದರಿಂದ ಬೇಸರಗೊಂಡ ವಿದ್ಯಾರ್ಥಿನಿ, ರೈಲ್ವೆ ಇಲಾಖೆಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಇದೀಗ ಅಂತಿಮಗೊಳಿಸಿದ ನ್ಯಾಯಾಲಯ, ವಿದ್ಯಾರ್ಥಿನಿ ಮಾಡಿರುವ ಆರೋಪಗಳು ನಿಜವೆಂದು ಪರಿಗಣಿಸಿ, ರೈಲ್ವೆ ಇಲಾಖೆಗೆ 9,10,000 ದಂಡ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ಬಸ್ತಿಯ ಕೊತ್ವಾಲಿ ಪೊಲೀಸ್ ಠಾಣಾ ಪ್ರದೇಶದ ಪಿಕೌರಾ ಬಕ್ಸ್ ಪ್ರದೇಶದ ನಿವಾಸಿಯಾಗಿರುವ ಸಮೃದ್ಧಿ ಎಂಬ ವಿದ್ಯಾರ್ಥಿನಿ, ನೀಟ್ ಪರೀಕ್ಷೆಗೆ ಹಾಜರಾಗಲು ಸಾಕಷ್ಟು ತಯಾರಿ ನಡೆಸಿದ್ದರು. ಲಕ್ನೋದ ಜಯನಾರಾಯಣ ಪಿಜಿ ಕಾಲೇಜಿನಲ್ಲಿ ಅವರಿಗೆ ಪರೀಕ್ಷಾ ಕೇಂದ್ರವಿತ್ತು. ಪರೀಕ್ಷೆಗೆ ಆಗಮಿಸಲು ಬಸ್ತಿಯಿಂದ ಇಂಟರ್‌ಸಿಟಿ ಸೂಪರ್‌ಫಾಸ್ಟ್ ರೈಲಿಗೆ ಟಿಕೆಟ್ ಖರೀದಿಸಿದ್ದರು. ಲಕ್ನೋದಲ್ಲಿ ರೈಲಿನ ನಿಗದಿತ ಆಗಮನದ ಸಮಯ ಬೆಳಿಗ್ಗೆ 11 ಗಂಟೆ ಆಗಿತ್ತು. ಆದರೆ ರೈಲು ಎರಡೂವರೆ ಗಂಟೆ ತಡವಾಗಿ ಬಂದಿದೆ. ಇದರಿಂದಾಗಿ ವಿದ್ಯಾರ್ಥಿನಿ ಮಧ್ಯಾಹ್ನ 12:30ರ ವೇಳೆಗೆ ಪರೀಕ್ಷಾ ಕೊಠಡಿ ತಲುಪಬೇಕಾಯಿತು. ಇದರ ಪರಿಣಾಮ, ಆಕೆಗೆ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
ಇದರಿಂದ ತೀವ್ರವಾಗಿ ಮನನೊಂದು ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ವಿಳಂಬಕ್ಕಾಗಿ ರೈಲ್ವೆ ಪರಿಣಾಮ ಎದುರಿಸಿದೆ. ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಮತ್ತು ನ್ಯಾಯಾಧೀಶರಾದ ಅಮರ್‌ಜೀತ್ ವರ್ಮಾ ಮತ್ತು ಆಯೋಗದ ಸದಸ್ಯ ಅಜಯ್ ಪ್ರಕಾಶ್ ಸಿಂಗ್ ಅವರು ವಿದ್ಯಾರ್ಥಿನಿಯ ದೂರು ಆಲಿಸಿ, ರೈಲ್ವೆಗೆ ಒಟ್ಟು 9,10,000 ರೂ. ಮೊತ್ತದ ಭಾರೀ ದಂಡ ವಿಧಿಸಿದ್ದಾರೆ. ರೈಲ್ವೆ ಇಲಾಖೆ ಪರಿಹಾರದ ಮೊತ್ತವನ್ನು ಪಾವತಿಸಲು ವಿಳಂಬಿಸಿದರೆ, ಗ್ರಾಹಕರಿಗೆ ಪಾವತಿ ಮೊತ್ತದ ಮೇಲೆ ಇನ್ನೂ ಹೆಚ್ಚುವರಿಯಾಗಿ ಶೇ.12ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಈ ಪ್ರಕರಣದ ಕುರಿತು ವಕೀಲ ಪ್ರಭಾಕರ್ ಮಿಶ್ರಾ ಅವರು ಪ್ರತಿಕ್ರಿಯಿಸಿ, ಸಮೃದ್ಧಿ ಅವರು 2018ರ ಮೇ 7ರಂದು ನೀಟ್ ಪರೀಕ್ಷೆಗೆ ಹಾಜರಾಗಲು ಲಕ್ನೋಗೆ ಹೋಗಬೇಕಿತ್ತು. ರೈಲು ವಿಳಂಬದಿಂದಾಗಿ ಅವರು ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ, ಅವರ ಶೈಕ್ಷಣಿಕ ವರ್ಷವೇ ವ್ಯರ್ಥವಾಗಿತ್ತು. ವಿದ್ಯಾರ್ಥಿನಿ ನನ್ನ ಮೂಲಕ ಜಿಲ್ಲಾ ಗ್ರಾಹಕ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ರೈಲ್ವೆ ಸಚಿವಾಲಯ, ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ನಿಲ್ದಾಣದ ಸೂಪರಿಂಟೆಂಡೆಂಟ್‌ಗೆ ನೋಟಿಸ್ ಕಳುಹಿಸಲಾಯಿತು. ಆದರೆ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿಸಿದರು.
2018ರ ಸೆಪ್ಟೆಂಬರ್ 11ರಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಯೋಗ ಎರಡೂ ಕಡೆಯ ವಾದಗಳನ್ನು ಆಲಿಸಿದೆ. ರೈಲ್ವೆ ಇಲಾಖೆ ರೈಲು ವಿಳಂಬವನ್ನು ಒಪ್ಪಿಕೊಂಡಿದೆ. ಆದರೆ ವಿಳಂಬಕ್ಕೆ ಸೂಕ್ತ ಕಾರಣಗಳನ್ನು ನೀಡಲಿಲ್ಲ. ಹಾಗಾಗಿ, ನ್ಯಾಯಾಲಯ ದಂಡ ವಿಧಿಸಿದೆ. 45 ದಿನಗಳಲ್ಲಿ ದಂಡ ಪಾವತಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದೆ.
